ADVERTISEMENT

ಅಡುಗೆಗೆ ವರ್ಷಕ್ಕೆ 6 ಸಿಲಿಂಡರ್ ಸಾಕು-ಸಚಿವರ ವಾದ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ನವದೆಹಲಿ: ಪ್ರತಿ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಸಂಖ್ಯೆಯನ್ನು ವರ್ಷಕ್ಕೆ 6ಕ್ಕೆ ಮಿತಿಗೊಳಿಸಿರುವುದನ್ನು ಬಲವಾಗಿ ಸಮರ್ಥಿಸಿಕೊಂಡ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ಅವರು, ಕುಟುಂಬವೊಂದು ವರ್ಷಕ್ಕೆ 6 ಕ್ಕಿಂತ ಹೆಚ್ಚು ಸಿಲಿಂಡರ್ ಬಯಸಿದರೆ ಅವು ಅಡುಗೆಗೆ ಬಿಟ್ಟು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತವೆ ಎನ್ನುವ ಭಾವನೆ ಮೂಡಿಸುತ್ತದೆ ಎಂದು  ಮಂಗಳವಾರ ಇಲ್ಲಿ ಅಭಿಪ್ರಾಯಪಟ್ಟರು.

`ಆರ್ಥಿಕ ಸಂಪಾದಕರ~ ಎರಡು ದಿನಗಳ ಸಮಾವೇಶದ ಕೊನೆಯಲ್ಲಿ ಅವರು ಮಾತನಾಡುತ್ತಿದ್ದರು. 
ಚಳಿ ಹೆಚ್ಚಿರುವ ರಾಜ್ಯಗಳ ಜನರಿಗಾದರೂ 6ಕ್ಕಿಂತ ಹೆಚ್ಚು `ಎಲ್‌ಪಿಜಿ~ಗಳನ್ನು ವಿತರಿಸುವ ಆಲೋಚನೆ ಸರ್ಕಾರಕ್ಕೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, `ವರ್ಷವೊಂದರಲ್ಲಿ ಪ್ರತಿ ಕುಟುಂಬಕ್ಕೆ 6 ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಇದಕ್ಕಿಂತ ಹೆಚ್ಚಿನ ಬೇಡಿಕೆ ಕಂಡು ಬಂದರೆ, ಗೃಹ ಬಳಕೆಗೆಂದು ಮರುಭರ್ತಿ ಮಾಡುವ ಹೆಚ್ಚುವರಿ ಸಿಲಿಂಡರ್‌ಗಳು ಬೇರೆ ಉದ್ದೇಶಗಳಿಗೆ ಬಳಕೆಯಾಗುವ ಅನುಮಾನ ಮೂಡಿಸುತ್ತದೆ~ ಎಂದು ವಿಶ್ಲೇಷಿಸಿದರು.

ದೇಶದಲ್ಲಿ ಸರಾಸರಿ ಕುಟುಂಬವೊಂದಕ್ಕೆ ವರ್ಷಕ್ಕೆ ಕೇವಲ 6 ಸಿಲಿಂಡರ್‌ಗಳು ಸಾಕಾಗುತ್ತವೆ ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಸಬ್ಸಿಡಿ ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ಈ ವಿವಾದಾತ್ಮಕ ನಿರ್ಧಾರ ಕೈಗೊಂಡು ಜಾರಿಗೊಳಿಸಲು ಮುಂದಾಗಿರುವುದರಿಂದ ಬಹಳಷ್ಟು ಕುಟುಂಬಗಳಿಗೆ ತೊಂದರೆ ಎದುರಾಗಿದೆ. ಇಂತಹ ಕುಟುಂಬಗಳು ಪ್ರತಿ ತಿಂಗಳೂ ಒಂದಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಬಳಸುತ್ತಿವೆ. ಇದರಿಂದ ಮಾರುಕಟ್ಟೆ ದರದಲ್ಲಿ `ಎಲ್‌ಪಿಜಿ~ ಖರೀದಿಸುವ ಅನಿವಾರ್ಯತೆ ಉದ್ಭವಿಸಿದೆ.

ಆದರೆ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರಗಳಲ್ಲಿ ವಾಸಿಸುವ ಜನರಿಗೆ ವರ್ಷವೊಂದರಲ್ಲಿ 6ಕ್ಕಿಂತ ಹೆಚ್ಚಿನ ಸಂಖ್ಯೆಯ ಎಲ್‌ಪಿಜಿ ಸಿಲಿಂಡರ್‌ಗಳು ಬೇಕಾಗುತ್ತವೆ ಎನ್ನುವುದನ್ನು ಒಪ್ಪಿಕೊಂಡ ಸಚಿವರು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಿಗೆ ಸಬ್ಸಿಡಿ ಹೊರೆ ಹೊರುವುದು ಸಾಧ್ಯವಾಗುತ್ತಿಲ್ಲ.  ಹೀಗಾಗಿ ಮಿತಿ ಹೇರುವುದು ಅನಿವಾರ್ಯವಾಗಿದೆ ಎಂದರು.

ಸಬ್ಸಿಡಿಯಲ್ಲಿ ವಿತರಿಸಲಾಗುತ್ತಿರುವ 14.2 ಕೆ.ಜಿ ತೂಕದ ಪ್ರತಿಯೊಂದು ಸಿಲಿಂಡರ್‌ನಿಂದ ತೈಲ ಮಾರಾಟ ಸಂಸ್ಥೆಗಳು 468ರೂ ನಷ್ಟ ಎದುರಿಸುತ್ತಿವೆ. ಇತ್ತೀಚೆಗೆ ಎಲ್‌ಪಿಜಿ, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದರೂ, ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ತೈಲ ಮಾರಾಟ ಸಂಸ್ಥೆಗಳ ವಾರ್ಷಿಕ ನಷ್ಟದ ಮೊತ್ತವು ಈ ವರ್ಷ ರೂ 1,67,415 ಕೋಟಿಗಳಷ್ಟು ಆಗಲಿದೆ. ಕಳೆದ ವರ್ಷ ಇದು 1,38,541 ಕೋಟಿ ರೂಪಾಯಿಗಳಾಗಿತ್ತು  ಎಂದು ರೆಡ್ಡಿ ನುಡಿದರು.

ಡೀಸೆಲ್, ಎಲ್‌ಪಿಜಿ ದರ ಏರಿಕೆ ಇಲ್ಲ: `ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಮಾಡುವ ಯಾವುದೇ ಸಾಧ್ಯತೆಯನ್ನು ಕೇಂದ್ರ ತಳ್ಳಿ ಹಾಕಿದೆ.  ಪ್ರಸಕ್ತ ಮಾರಾಟ ದರವು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದ್ದರೂ, ಬೆಲೆಯಲ್ಲಿ ಏರಿಕೆ ಮಾಡುವುದಿಲ್ಲ~.

ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರವು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 5.56 ರೂಪಾಯಿಯಷ್ಟು ಹೆಚ್ಚಿಸಿತ್ತು. ಅಲ್ಲದೇ ಸಬ್ಸಿಡಿ ನೀಡಲಾಗುವ ಅಡುಗೆ ಅನಿಲ ಸಿಲಿಂಡರ್ ಮಿತಿಯನ್ನು ಪ್ರತಿ ವರ್ಷಕ್ಕೆ 6 ಎಂದು ನಿಗದಿ ಪಡಿಸಿತ್ತು. ಈ ಹಿನ್ನೆಲೆಯಲ್ಲಿ `ಡೀಸೆಲ್, ಎಲ್‌ಪಿಜಿ ಬೆಲೆ ಏರಿಕೆ ಮಾಡಲು ಚಿಂತನೆ ನಡೆಸುತ್ತಿದ್ದೀರಾ~ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ `ಬೆಲೆ ಏರಿಸುವ ಅನಿವಾರ್ಯತೆ ಇದ್ದರೂ, ಧೈರ್ಯ ಇಲ್ಲ~ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.