ADVERTISEMENT

ಅಡ್ವಾಣಿ ರಥಯಾತ್ರೆ ಮಾರ್ಗದಲ್ಲಿ ಬಾಂಬ್ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST
ಅಡ್ವಾಣಿ ರಥಯಾತ್ರೆ ಮಾರ್ಗದಲ್ಲಿ ಬಾಂಬ್ ಪತ್ತೆ
ಅಡ್ವಾಣಿ ರಥಯಾತ್ರೆ ಮಾರ್ಗದಲ್ಲಿ ಬಾಂಬ್ ಪತ್ತೆ   

ಮದುರೈ (ಪಿಟಿಐ): ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಜನಚೇತನ ರಥಯಾತ್ರೆ ಸಾಗಬೇಕಾಗಿದ್ದ ಮಾರ್ಗದಲ್ಲಿ ಸೇತುವೆ ಕೆಳಗೆ ಹುದುಗಿಸಿ ಇಡಲಾಗಿದ್ದ ಶಕ್ತಿಶಾಲಿ ಬಾಂಬ್ ಅನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮದುರೈನಿಂದ 30 ಕಿ.ಮೀ.ದೂರದ ತಿರುಮಂಗಲಂ ಬಳಿಯ ಅಲಂಪಟ್ಟಿ ಎಂಬಲ್ಲಿ ಸೇತುವೆ ಕೆಳಗೆ ಈ ಬಾಂಬ್ ಅನ್ನು ಹುದುಗಿಸಿಡಲಾಗಿತ್ತು.  ಸೀರೆಯಲ್ಲಿ ಸುತ್ತಿ ಕುರುಚಲು ಗಿಡಗಳ ನಡುವೆ ಇದನ್ನು ಬಚ್ಚಿಡಲಾಗಿತ್ತು. ಎರಡು ಪಿವಿಸಿ ಪೈಪುಗಳಲ್ಲಿ 10 ಕೆ.ಜಿ ಜಿಲೆಟಿನ್ ಪುಡಿಯನ್ನು ತುರಕಲಾಗಿತ್ತು ಮತ್ತು ಇವುಗಳನ್ನು ಪರಸ್ಪರ ಕೂಡಿಸಿ ಕಟ್ಟಲಾಗಿತ್ತು.

ಈ ಪೈಪುಗಳಿಗೆ ನಾಲ್ಕು ಡಿಟೋನೇಟರ್‌ಗಳನ್ನು ಜೋಡಿಸಲಾಗಿತ್ತು. ಇವು 12 ವೋಲ್ಟ್ ಸಾಮರ್ಥ್ಯದ ಬ್ಯಾಟರಿಗಳ ಸಂಪರ್ಕ ಹೊಂದಿದ್ದವು. ಇವಕ್ಕೆ 50 ಮೀಟರ್ ಉದ್ದನೆಯ ತಂತಿಗಳನ್ನು ಹೆಣೆಯಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ನಾಗರಕೊಯಿಲ್ ಬಳಿ ಪೊಲೀಸರು ವೈದ್ಯರು ಬಳಸುವ ಕೈಗವಸುಗಳು ಮತ್ತು ಜಿಲೆಟಿನ್ ಪುಡಿ ಇದ್ದುದನ್ನು ಪತ್ತೆ ಹಚ್ಚಿ ವಶಪಡಿಸಿ ಕೊಂಡಿದ್ದಾರೆ.

ಸಮೀಪದ ಮದುರೈ ಹಾಗೂ ತೇಣಿ ಜಿಲ್ಲೆಗಳಲ್ಲಿ ನಕ್ಸಲರ ನೆಲೆಗಳಿವೆ. ಆದ್ದರಿಂದ ಈ ಕೃತ್ಯ ಅವರದೇ ಕೈವಾಡ ಇರಬಹುದು. ಈಗಾಗಲೇ ಈ ಸಂಬಂಧ ನೆಹರು ಎಂಬ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು ಅವನನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸ್ಫೋಟಕಗಳನ್ನು ಮೊದಲಿಗೆ ಸ್ಥಳೀಯರು ಗಮನಿಸಿ ಪಂಚಾಯಿತಿ ಸದಸ್ಯರಿಗೆ ಸುದ್ದಿ ಮುಟ್ಟಿಸಿದರು. ನಂತರ ಈ ಸದಸ್ಯರು ಪೊಲೀಸರಿಗೆ ವಿಷಯ ತಿಳಿಸಿದರು. ಘಟನೆಯಿಂದಾಗಿ ಅಡ್ವಾಣಿ ಅವರ ರಥಯಾತ್ರೆ ಮಾರ್ಗವನ್ನು ತಕ್ಷಣವೇ ಬದಲಿಸಲಾಯಿತು.

`ಭದ್ರತೆಯ ನಂಬಿಕೆಯಿದೆ~: `ಅಡ್ವಾಣಿ ಅವರ ರಥಯಾತ್ರೆ ನಿಗದಿಯಂತೆ ತನ್ನ ಮಾರ್ಗವನ್ನು  ಕ್ರಮಿಸಲಿದೆ~ ಎಂದು ಬಿಜೆಪಿಯ ವಕ್ತಾರ ಪ್ರತಾಪ್ ರೂಡಿ ದೆಹಲಿಯಲ್ಲಿ ತಿಳಿಸಿದ್ದಾರೆ.

`ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಡ್ವಾಣಿ ಅವರಿಗೆ ಸೂಕ್ತ ಭದ್ರತೆ ನೀಡುತ್ತವೆ ಎಂಬ ಬಗ್ಗೆ ಬಿಜೆಪಿಗೆ ನಂಬಿಕೆಯಿದೆ~ ಎಂದೂ ಅವರು ಹೇಳಿದ್ದಾರೆ.

1998ರಲ್ಲಿ ಕೊಯಮತ್ತೂರಿನಲ್ಲಿ ಅಡ್ವಾಣಿ ಅವರ ಚುನಾವಣಾ ಪ್ರಚಾರ ಭಾಷಣ ನಡೆಯುವ ಗಂಟೆಗಳ ಮುನ್ನ  ಭಾರಿ ಬಾಂಬ್ ಸ್ಫೋಟ ಸಂಭವಿಸಿತ್ತು. ಆ ಘಟನೆಯಲ್ಲಿ 58 ಜನರು ಮೃತಪಟ್ಟು 200 ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.