ADVERTISEMENT

ಅಧಿಕಾರಿ ದುರ್ಗಾಶಕ್ತಿಗೆ ನ್ಯಾಯದ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ನವದೆಹಲಿ (ಪಿಟಿಐ): ಸೇವೆಯಿಂದ ಅಮಾನತು ಗೊಂಡಿರುವ ಉತ್ತರಪ್ರದೇಶದ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್‌ಪಾಲ್ ಅವರಿಗೆ ನ್ಯಾಯ ಒದಗಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಗಣಿಗಾರಿಕೆ ಮಾಫಿಯಾವನ್ನು ನಿಯಂತ್ರಣಕ್ಕೆ ತಂದಿರುವ ದುರ್ಗಾ ಶಕ್ತಿ ಅವರ ಅಮಾನತನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗಳ ಹಿನ್ನೆಲೆಯಲ್ಲಿ ಕೇಂದ್ರ ಈ ಭರವಸೆ ನೀಡಿದೆ.

ಅಖಿಲ ಭಾರತ ಐಎಎಸ್ ಅಧಿಕಾರಿಗಳ ಒಕ್ಕೂಟ ಗುರುವಾರ ದೆಹಲಿಯಲ್ಲಿ ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಅವರನ್ನು ಭೇಟಿ ಮಾಡಿ ಅಮಾನತು ಆದೇಶವನ್ನು ವಾಪಸ್ ಪಡೆಯವಂತೆ ಮನವಿ ಮಾಡಿದರು. ಜೊತೆಗೆ, ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಗಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಕೋರಿದರು.

ಒಂದು ಅವಕಾಶವನ್ನೂ ಕೊಡದೆ ದುರ್ಗಾ ಶಕ್ತಿ ನಾಗಪಾಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ ನಾರಾಯಣ ಸ್ವಾಮಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಳುಹಿಸಲಿರುವ ವರದಿಗಾಗಿ ಸರ್ಕಾರ ಕಾಯುತ್ತಿದೆ  ಎಂದರು.

`ನನ್ನ ಕೈಗೆ ವರದಿ ಬರುವವರೆಗೆ, ಜನರು ವ್ಯಕ್ತಪಡಿಸುವ ಭಾವನೆಗಳಿಗೆ ಅಥವಾ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

ಅಖಿಲೇಶ್ ಸಮರ್ಥನೆ (ಲಖನೌ ವರದಿ):  ದುರ್ಗಾ ಶಕ್ತಿ ನಾಗ್‌ಪಾಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸದೇ ಮಸೀದಿಯ ಗೋಡೆಯನ್ನು ನೆಲಸಮ ಗೊಳಿಸಿದ್ದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆಯೇ ಹೊರತು, ಅಕ್ರಮ ಮರಳು ಗಣಿಗಾರಿಕೆಯನ್ನು ತಡೆದದ್ದಕ್ಕಾಗಿ ಅಲ್ಲ ಎಂದು ಅಖಿಲೇಶ್ ಹೇಳಿದ್ದಾರೆ.

`ಇದು ಗಣಿಗಾರಿಕೆಯ ವಿಚಾರವಲ್ಲ... ನಾವು ಕೂಡ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸುತ್ತೇವೆ. ಮಸೀದಿ ಗೋಡೆಯನ್ನು ನೆಲಸಮಗೊಳಿಸಿದ್ದು ಸಮಾಜದ ಸಾಮರಸ್ಯವನ್ನು ಕದಡಿದೆ. ಅಧಿಕಾರಿಯೊಬ್ಬರು ಇಂಥ ಕ್ರಮಕ್ಕೆ ಮುಂದಾಗುತ್ತಾರೆ ಎಂದಾದರೆ, ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಸಂಪುಟ ಸಭೆಯ ನಂತರ ಅಖಿಲೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ನಾಗ್‌ಪಾಲ್ ವಿರುದ್ಧ ಕೈಗೊಂಡಿರುವ ಕ್ರಮ ಸೂಕ್ತವಾಗಿದೆ' ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

`ಅಧಿಕಾರಿಗಳು ವ್ಯಾಪ್ತಿ ಮೀರಬಾರದು'
ಸರ್ಕಾರಿ ಅಧಿಕಾರಿಗಳು ಕಾನೂನಿನ ಪ್ರಕಾರ ಹಾಗೂ ವಹಿಸಿದ ಕೆಲಸವನ್ನು ಮಾತ್ರ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಹೇಳಿದ್ದಾರೆ.

ಅಧಿಕಾರಿಗಳಿಗೆ ಸ್ವಾತಂತ್ರ್ಯ ಇರಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇನೆ, ಅದರೆ ಈ ಅಧಿಕಾರಿಗಳು ಕಾನೂನು ವ್ಯಾಪ್ತಿ ಮೀರಿ ಹೋಗಬಾರದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT