ADVERTISEMENT

ಅಪಘಾತ: ಅಂಗವಿಕಲೆಗೆ ರೂ 6 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ನವದೆಹಲಿ: ರಸ್ತೆ ಅಪಘಾತಗಳಲ್ಲಿ ನೊಂದವರಿಗೆ ಪರಿಹಾರ ನಿರ್ಧರಿಸುವಾಗ `ಉದಾರ ಮತ್ತು ಸಮತೋಲನ~ದ ಧೋರಣೆಯನ್ನು ನ್ಯಾಯಾಲಯಗಳು ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ತಮಿಳುನಾಡಿನಲ್ಲಿ ಎರಡು ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದ ಸುಬ್ಬುಲಕ್ಷ್ಮಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಬ್ಬುಲಕ್ಷ್ಮಿ ಬೆಂಕಿಪೊಟ್ಟಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. 1998ರಲ್ಲಿ ಅಪಘಾತ ನಡೆದಾಗ ಪರಿಹಾರ ಯಾಚಿಸಿ ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಶಾಶ್ವತ ಅಂಗವೈಕಲ್ಯ ಮತ್ತು ಭವಿಷ್ಯದ ಆದಾಯ ನಷ್ಟದ ಮೊತ್ತ ಪರಿಗಣಿಸಿ ರೂ 2 ಲಕ್ಷ ಪರಿಹಾರ ನೀಡಲು ಮಂಡಳಿಯು 2002ರಲ್ಲಿ  ಆದೇಶಿಸಿತ್ತು.

ಈ ತೀರ್ಪಿನ ವಿರುದ್ಧ ಸುಬ್ಬುಲಕ್ಷ್ಮಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದಾಗ ಕೋರ್ಟ್ ಪರಿಹಾರವನ್ನು ರೂ 2.75ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ ಶಾಶ್ವತ ಅಂಗವೈಕಲ್ಯಕ್ಕೆ ಯಾವುದೇ ಪರಿಹಾರ ಸೂಚಿಸಿರಲಿಲ್ಲ.
ಈ ಆದೇಶವನ್ನು ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಕೃತಕ ಕಾಲು ಜೋಡಣೆಗಾಗಿ ಮತ್ತು ಅವರು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ನೋವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಸುಬ್ಬುಲಕ್ಷ್ಮಿ ಅವರಿಗೆ ನೀಡಬೇಕಾಗಿರುವ ಒಟ್ಟು ಪರಿಹಾರವನ್ನು ರೂ 6,48,640ಕ್ಕೆ ಹೆಚ್ಚಿಸಿತು. ಎಂಟು ವಾರಗಳೊಳಗೆ ವಾರ್ಷಿಕ ಶೇ 9ರಷ್ಟು ಬಡ್ಡಿಯೊಂದಿಗೆ  ಈ ಮೊತ್ತವನ್ನು ಪಾವತಿ ಮಾಡಬೇಕು ಎಂದು ಸಾರಿಗೆ ನಿಗಮಕ್ಕೆ ನಿರ್ದೇಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.