
ನವದೆಹಲಿ: 2015 ನವೆಂಬರ್ ತಿಂಗಳಲ್ಲಿ ಬಾಲಿವುಡ್ ನಟ ಅಮೀರ್ ಖಾನ್ 'ಭಾರತದಲ್ಲಿ ಅಸಹಿಷ್ಣುತೆ ಇದೆ' ಎಂದು ಹೇಳಿದ್ದು ವಿವಾದ ಸೃಷ್ಟಿಸಿತ್ತು. ಈ ಹೊತ್ತಿನಲ್ಲಿ ಅಮೀರ್ ಖಾನ್ ಅವರನ್ನು ತಮ್ಮ ರಾಯಭಾರಿ ಸ್ಥಾನದಿಂದ ಕೈ ಬಿಡುವಂತೆ ಸ್ನ್ಯಾಪ್‍ಡೀಲ್ ಮೇಲೆ ಒತ್ತಡ ಹೇರಿ ಎಂದು ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಮುಖ್ಯಸ್ಥರು ಸೋಷಿಯಲ್ ಮೀಡಿಯಾ ವಿಭಾಗಕ್ಕೆ ಹೇಳಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ.
ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಬರೆದ ಐ ಆ್ಯಮ್ ಎ ಟ್ರೋಲ್ ( I am a Troll) ಎಂಬ ಪುಸ್ತಕದಲ್ಲಿ ಈ 'ಸತ್ಯ' ಬಹಿರಂಗವಾಗಿದೆ.
ಸಾಧವಿ ಖೋಸ್ಲಾ ಎಂಬವರು ಬಿಜೆಪಿ ಸೋಷಿಯಲ್ ಮೀಡಿಯಾ ಸೆಲ್ (ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಪರ ಪ್ರಚಾರ ಕಾರ್ಯಗಳನ್ನು ಮಾಡುವ ವಿಭಾಗ)ದಲ್ಲಿ ಕಾರ್ಯ ನಿರ್ವಹಿಸಿದ್ದು, 2015ರ ವರ್ಷಾಂತ್ಯದಲ್ಲಿ ಕೆಲಸ ಬಿಟ್ಟು ಹೊರ ಬಂದಿದ್ದರು. ಅಮೀರ್ ಖಾನ್ ಅವರನ್ನು ಸ್ನ್ಯಾಪ್‍ಡೀಲ್ ರಾಯಭಾರಿ ಸ್ಥಾನದಿಂದ ಕಿತ್ತೊಗೆಯುವಂತೆ ಮಾಡಲು ಬಿಜೆಪಿ ಏನೆಲ್ಲಾ ಮಾಡಿತ್ತು ಎಂಬುದನ್ನು ಸಾಧವಿ ಅವರೇ ಸ್ವಾತಿಯವರಿಗೆ ಹೇಳಿದ್ದಾರೆ.
ಜಗ್ಗರ್‍ನೌಟ್ ಪ್ರಕಾಶನ ಸಂಸ್ಥೆ ಐ ಆ್ಯಮ್ ಎ ಟ್ರೋಲ್ ಎಂಬ ಪುಸ್ತಕವನ್ನು ಹೊರ ತಂದಿದೆ.
ನವೆಂಬರ್ 23, 2015ರಂದು ರಾಮನಾಥ್ ಗೊಯೆಂಕಾ ಎಕ್ಸೆಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅಮೀರ್ ಖಾನ್, 'ದೇಶದಲ್ಲಿ ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿರುವ ಘಟನೆಗಳು ಅಭದ್ರತೆ ಮತ್ತು ಭೀತಿಯ ವಾತಾವರಣ ಉಂಟುಮಾಡಿದೆ. ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಪತ್ನಿ ಕಿರಣ್ ರಾವ್ ಆತಂಕಕ್ಕೆ ಒಳಗಾಗಿದ್ದಳು. ಕುಟುಂಬ ಸಮೇತ ದೇಶ ಬಿಟ್ಟು ಹೋಗುವ ಬಗ್ಗೆ ಪ್ರಸ್ತಾಪಿಸಿದ್ದಳು’ ಎಂದು ಹೇಳಿದ್ದು ವಿವಾದಕ್ಕೀಡಾಗಿತ್ತು.
ಅಮೀರ್ ಖಾನ್ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಬಿಜೆಪಿ ಸೋಷಿಯಲ್ ಮೀಡಿಯಾ ಸೆಲ್ ಖಾನ್ ಅವರನ್ನು ಸ್ನ್ಯಾಪ್‍ಡೀಲ್ ರಾಯಭಾರಿ ಸ್ಥಾನದಿಂದ ಕಿತ್ತೊಗೆಯುವಂತೆ ಮಾಡಲು ಪ್ರಚಾರತಂತ್ರವನ್ನು ಹೆಣೆದಿತ್ತು, ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅರವಿಂದ ಗುಪ್ತ ಅವರು ಸೋಷಿಯಲ್ ಮೀಡಿಯಾ ಸೆಲ್‍ಗೆ ಯಾವ ರೀತಿಯ ನಿರ್ದೇಶನ ನೀಡಿದ್ದರು ಎಂಬುದಕ್ಕೆ ಸಾಕ್ಷ್ಯ ಎಂಬಂತೆ ಸಾಧವಿ ಅವರು ತಮ್ಮ ತಂಡ ವಾಟ್ಸಾಪ್ ಗ್ರೂಪ್‍ನಲ್ಲಿ ಶೇರ್ ಮಾಡಲಾದ ಸಂದೇಶವನ್ನು ಬಹಿರಂಗ ಪಡಿಸಿದ್ದಾರೆ.
ಅಮೀರ್ ಖಾನ್ ಹೇಳಿಕೆ ನೀಡಿದ ದಿನದ ನಂತರ ಗುಪ್ತ ಅವರು ಸಾಧವಿ ಅವರಿಗೆ ಕಳಿಸಿದ ಸಂದೇಶವೊಂದು ಹೀಗಿದೆ.
ಸ್ನ್ಯಾಪ್‍ಡೀಲ್ ಇಂಡಿಯಾಗೆ ಕಳಿಸಬೇಕಾಗಿರುವ ಮನವಿಗೆ ಸಹಿ ಮಾಡಿ. ಅವರ ಜಾಹೀರಾತಿನಿಂದ ಅಮೀರ್ ಖಾನ್ ಅವರನ್ನು ಕೈಬಿಡುವಂತೆ ಒತ್ತಾಯಿಸಿ ಎಂಬ ಸಂದೇಶದೊಂದಿಗೆ ಆನ್‍ಲೈನ್ ಮನವಿಯ ಲಿಂಕ್ ಅನ್ನು ಕಳಿಸಲಾಗಿತ್ತು, ಈ ವಿವಾದದ ನಂತರ ಸ್ನ್ಯಾಪ್‍ಡೀಲ್ ಅಮೀರ್ ಖಾನ್‍ರೊಂದಿಗೆ ಜಾಹೀರಾತು ಒಪ್ಪಂದವನ್ನು ನವೀಕರಿಸಿಕೊಂಡಿಲ್ಲ.
ಆದರೆ ಸಾಧವಿ ಅವರ ಆರೋಪವನ್ನು ಗುಪ್ತ ಅವರು ತಳ್ಳಿ ಹಾಕಿದ್ದಾರೆ, ಸಾಧವಿ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಾರೆ, ಹಾಗಾಗಿ ಅವರು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಸಾಧವಿ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡು ಚತುರ್ವೇದಿ ಅವರು ಕಲ್ಪನೆಯ ಕಥೆಗಳನ್ನು ಹಣೆದಿದ್ದಾರೆ.
ಬಿಜೆಪಿ ಯಾವತ್ತೂ ಟ್ರೋಲ್‍ಗಳಿಗೆ ಪ್ರೋತ್ಸಾಹ ನೀಡಿಲ್ಲ, ನಾವು ನಮ್ಮ ವೆಬ್‍ಸೈಟ್‍ನಲ್ಲಿಯೇ ಸಾಮಾಜಿಕ ತಾಣಗಳ ಸಲಹಾಸೂತ್ರಗಳನ್ನು ಪ್ರಕಟಿಸಲಾಗಿದೆ. 2015 ಜುಲೈ ನಂತರ ಬಿಜೆಪಿಯ ಸೋಷಿಯಲ್ ಮೀಡಿಯಾ ಸೆಲ್‍ನ ಜವಾಬ್ದಾರಿಯನ್ನು ಬೇರೊಬ್ಬರು ವಹಿಸಿಕೊಂಡಿದ್ದಾರೆ ಎಂದು ಗುಪ್ತ ಹೇಳಿದ್ದಾರೆ.
ನವೆಂಬರ್ 24ರಂದು ಕಳಿಸಿದ ಇನ್ನೊಂದು ವಾಟ್ಸಪ್ ಸಂದೇಶ ಹೀಗಿದೆ.
ಗ್ರೀನ್ ಪ್ಲೇ ಪ್ಲೈವುಡ್ ಮೇಲೆ ದಾಳಿ ನಡೆಸಿ ಅವರ ಜಾಹೀರಾತುಗಳನ್ನು ರದ್ದು ಮಾಡಿದಂತೆ ನಾನು ಸ್ನ್ಯಾಪ್‍ಡೀಲ್ ಮೇಲೆಯೂ ದಾಳಿ ಮಾಡಬೇಕಾಗಿದೆ. ಸ್ನ್ಯಾಪ್‍ಡೀಲ್ ಕಸ್ಟಮರ್ ಕೇರ್ ನಂಬರ್, ಋಣಾತ್ಮಕ ಪ್ರಚಾರ ಮತ್ತು ಅಮೀರ್ ಖಾನ್ ಅವರನ್ನು ರಾಯಭಾರಿ ಸ್ಥಾನದಿಂದ ಕೈಬಿಡದೇ ಇದ್ದರೆ ಆಗುವ ಪರಿಣಾಮ ಎಲ್ಲದರ ಬಗ್ಗೆಯೂ ನಾವು ನಡುಕ ಹುಟ್ಟಿಸಬೇಕು. ಹಿಂದೂಗಳೆಲ್ಲರೂ ಒಟ್ಟಾಗಿ ನಮ್ಮ ಏಕತೆಯನ್ನು ತೋರಿಸೋಣ ಎಂದು ಹಿಂದೂ ಡಿಫೆನ್ಸ್ ಲೀಗ್ (ಹೆಚ್‍ಡಿಎಲ್) ಸಂದೇಶ ಕಳುಹಿಸಿತ್ತು.
“2 Year Old Jaan! The child Aamir Khan abandoned'' ಎಂಬ ಶೀರ್ಷಿಕೆಯಿರುವ ಸುದ್ದಿಯೊಂದಲ್ಲೂ ಹೆಚ್‍ಡಿಎಲ್ ಸಾಧವಿ ಅವರಿಗೆ ಕಳುಹಿಸಿ ಕೊಟ್ಟಿತ್ತು, ಹೆಚ್‍ಡಿಎಲ್ ಟ್ವಿಟರ್ ನಲ್ಲಿ @HDLindiaOrg ಎಂಬ ಖಾತೆ ಹೊಂದಿದ್ದು, ಅದೀಗ ರದ್ದಾಗಿದೆ.
2016 ಜುಲೈ 30ರಂದು ಒಬ್ಬ ನಟ ತಾನು ತನ್ನ ಪತ್ನಿಯೊಂದಿಗೆ ದೇಶ ತೊರೆಯುತ್ತೇನೆ ಎಂದು ಹೇಳಿದ್ದರು. ಅದೊಂದು ಅಹಂಕಾರದಿಂದ ಕೂಡಿದ ಹೇಳಿಕೆಯಾಗಿತ್ತು. ನಾನು ಬಡವನಾಗಿದ್ದು, ನನ್ನ ಮನೆ ಚಿಕ್ಕದಾಗಿದ್ದರೂ, ನಾನು ನನ್ನ ಮನೆಯನ್ನು ಪ್ರೀತಿಸುತ್ತೇನೆ. ಆ ಮನೆಯನ್ನು ದೊಡ್ಡ ಬಂಗಲೆಯನ್ನಾಗಿ ಮಾಡುವ ಕನಸು ಕಾಣುತ್ತೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಅವರ ಹೆಸರನ್ನು ಉಲ್ಲೇಖಿಸದೆ ಕಾರ್ಯಕ್ರಮವೊಂದರಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಖಾನ್ ವಿರುದ್ಧ ಟೀಕಾಪ್ರಹಾರ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.