ADVERTISEMENT

ಅರುಣಾಚಲ: ಸಿ.ಎಂ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2011, 19:30 IST
Last Updated 31 ಅಕ್ಟೋಬರ್ 2011, 19:30 IST
ಅರುಣಾಚಲ: ಸಿ.ಎಂ ರಾಜೀನಾಮೆ
ಅರುಣಾಚಲ: ಸಿ.ಎಂ ರಾಜೀನಾಮೆ   

ಇಟಾ ನಗರ (ಪಿಟಿಐ):  ಅರುಣಾಚಲ ಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಜರೋಮ್ ಗ್ಯಾಮ್ಲಿನ್ ಅವರು ಕೊನೆಗೂ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡಲಿದ್ದು, ಅಂದೇ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೊಸ ನಾಯಕನನ್ನು ಆಯ್ಕೆ ಮಾಡುವ ಒಂದು ಅಂಶದ ನಿರ್ಣಯವುಳ್ಳ ಪತ್ರವನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಬಾಮ್ ನುಕಿ ನೇತೃತ್ವದ 42 ಭಿನ್ನಮತೀಯ ಕಾಂಗ್ರೆಸ್ ಶಾಸ ಕರು ಸೋನಿಯಾ ಅವರಿಗೆ ಬರೆದಿದ್ದರು.

ನಾಯಕನ ಆಯ್ಕೆಯ ಹೊಣೆಯನ್ನೂ ಅವರಿಗೆ ವಹಿಸಿದ್ದರು.  ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಹಾಗೂ ಇತರ ಇಬ್ಬರು ವೀಕ್ಷಕರು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ.

ಏಪ್ರಿಲ್ 30ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಸಾವನ್ನಪ್ಪಿದ್ದರಿಂದ ತೆರವಾದ ಸ್ಥಾನವನ್ನು ಜರೋಮ್ ಮೇ 5ರಂದು ಅಲಂಕರಿಸಿದ್ದರು.

ಆ ನಂತರ ಅವರು ಮತ್ತು ನುಕಿ ನಡುವಿನ ಶೀತಲ ಸಮರ ಪಕ್ಷವನ್ನು ಇಬ್ಭಾಗದತ್ತ ಕೊಂಡೊಯ್ದಿತ್ತು. ವಿಧಾನಸಭೆಯ ಒಟ್ಟು 60 ಸ್ಥಾನಗಳ ಪೈಕಿ ಕಾಂಗ್ರೆಸ್ 42, ತೃಣಮೂಲ ಕಾಂಗ್ರೆಸ್ 5, ಎನ್‌ಸಿಪಿ 5 ಹಾಗೂ ಬಿಜೆಪಿ 3 ಸ್ಥಾನಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.