ನವದೆಹಲಿ (ಪಿಟಿಐ): ಸಾಂವಿಧಾನಿಕ ಸ್ಥಾನಮಾನಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು (ಎನ್‌ಸಿಎಂ) ಇದೀಗ ಆ ಬೇಡಿಕೆಯನ್ನು ಬದಿಗೊತ್ತಿ, ಮಾನವ ಹಕ್ಕು ಆಯೋಗಕ್ಕೆ ನೀಡಿದಂತೆ ತನಗೂ ತನಿಖಾ ಅಧಿಕಾರವನ್ನು ಕೊಡಬೇಕೆಂದು ಒತ್ತಾಯಿಸಿದೆ.
`ಎನ್‌ಸಿಎಂ ಕಾಯ್ದೆಗೆ ಸಾಂವಿಧಾನಿಕ ಸ್ಥಾನಮಾನಕ್ಕಾಗಿ ಇಟ್ಟ ಬೇಡಿಕೆಯನ್ನು ಕೈಬಿಡಲಾಗಿದೆ. ಇದೇ ಕಾಯ್ದೆಗೆ ಸಾಂವಿಧಾನಿಕ ಸ್ಥಾನಮಾನ ನೀಡುವುದರಿಂದ ಏನೂ ವ್ಯತ್ಯಾಸವಾಗುವುದಿಲ್ಲ~ ಎಂದು ಆಯೋಗದ ಅಧ್ಯಕ್ಷ ವಜಹತ್ ಹಬೀಬುಲ್ಲಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
`ನ್ಯಾಯಾಂಗ ಹಾಗೂ ಆಡಳಿತದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಆಯೋಗಕ್ಕೆ ಅವಕಾಶ ನೀಡಬೇಕಾಗಿದೆ. ಹಾಗೆಂದು ಆಯೋಗವು ಇವುಗಳ ಸ್ಥಾನವನ್ನು ಆಕ್ರಮಿಸಿಕೊಳ್ಳಲಾಗದು~ ಎಂದೂ ಅವರು ಹೇಳಿದ್ದಾರೆ.
ಈಗ ಜಾರಿಯಲ್ಲಿರುವ ಎನ್‌ಸಿಎಂ ಕಾಯ್ದೆಯಲ್ಲಿ ಕೆಲವು ಲೋಪಗಳಿಗೆ ಎನ್ನುವುದನ್ನು ಒಪ್ಪಿಕೊಂಡ ಅವರು `ಇದರಲ್ಲಿ ಸಾಕಷ್ಟು ತನಿಖಾ ಅಧಿಕಾರವಿಲ್ಲ~ ಎಂದಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ನೀಡಲಾಗಿರುವ ತನಿಖಾ ಅಧಿಕಾರವನ್ನು ಅಲ್ಪಸಂಖ್ಯಾತ ಆಯೋಗಕ್ಕೂ ನೀಡಬೇಕು ಎನ್ನುವುದು ನಮ್ಮ ಬೇಡಿಕೆ~ ಎಂದಿದ್ದಾರೆ.
`ಆಯೋಗವು ಎರಡು-ಮೂರು ತಿಂಗಳ ಹಿಂದೆಯೇ ಸಂಬಂಧಪಟ್ಟ ಸಚಿವಾಲಯದ ಮುಂದೆ ಬೇಡಿಕೆಗಳನ್ನು ಇಟ್ಟಿದೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಹುಶಃ ಸಚಿವಾಲಯವು ನಮ್ಮ ಬೇಡಿಕೆಗಳನ್ನು ಪರಿಶೀಲಿಸುತ್ತಿರಬಹುದು~ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.