ADVERTISEMENT

ಅವರಿಬ್ಬರನ್ನಷ್ಟೇ ಬಲಿಪಶು ಮಾಡುವುದು ಬೇಡ:ಗಡ್ಕರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:00 IST
Last Updated 3 ಫೆಬ್ರುವರಿ 2011, 18:00 IST


ನವದೆಹಲಿ (ಪಿಟಿಐ): ‘2ಜಿ ತರಂಗಾಂತರ ಹಂಚಿಕೆ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಕೇಂದ್ರ ಸಚಿವ ಸಂಪುಟ ಮತ್ತು ಪ್ರಧಾನಿ ತೆಗೆದುಕೊಂಡಿರುವುದರಿಂದ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರನ್ನು ಮಾತ್ರ ಬಲಿಪಶುವಾಗಿಸಬಾರದು’ ಎಂದು ಬಿಜೆಪಿ ಹೇಳಿದೆ.

ಈ ಎರಡೂ ಹಗರಣಗಳನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಳಪಡಿಸಿದರೆ ಮಾತ್ರ ಸತ್ಯ ಹೊರಗೆ ಬರಲು ಸಾಧ್ಯ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಸುದ್ದಿಗಾರರಿಗೆ ತಿಳಿಸಿದರು.

ರಾಜಾ ಮತ್ತು ಕಲ್ಮಾಡಿ ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಸಚಿವ ಸಂಪುಟ ಮತ್ತು ಪ್ರಧಾನಿ ಅವರ ಅನುಮತಿ ಪಡೆದಿದ್ದಾರೆ.

ಆದ್ದರಿಂದ ಅವರಿಬ್ಬರನ್ನೇ ಬಲಿಪಶು ಮಾಡಬಾರದು. ರಾಜಾ ಮತು ಕಲ್ಮಾಡಿ ತಪ್ಪಿತಸ್ಥರು ನಿಜ. ಆದರೆ ಅವರಿಬ್ಬರೇ ಈ ಹಗರಣಗಳಿಗೆ ಜವಾಬ್ದಾರರಲ್ಲ. ರಾಜಾ ಅವರ ಗಾಡ್‌ಫಾದರ್ ಯಾರು ಮತ್ತು ಈ ಹಗರಣದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದನ್ನು ತಿಳಿಯುವ ಹಕ್ಕು ದೇಶದ ಜನತೆಗೆ ಇದೆ.

 ಇದರಲ್ಲಿ ಶಾಮೀಲಾಗಿರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಆದ್ದರಿಂದ ಜೆಪಿಸಿ ತನಿಖೆಗೆ ಆದೇಶಿಸಬೇಕು ಎಂದು ಗಡ್ಕರಿ ಒತ್ತಾಯಿಸಿದರು.

 ಈಗ ನಡೆಯುತ್ತಿರುವ ತನಿಖೆಗಳೆಲ್ಲ ಕಣ್ಣೊರಿಸುವ ತಂತ್ರ ಎಂದು ಟೀಕಿಸಿರುವ ಗಡ್ಕರಿ ಅವರು, ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರ ಶಾಮೀಲಾಗದೆ 2ಜಿ ಹಗರಣ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

2ಜಿ ತರಂಗಾಂತರ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಅವರು ನೀತಿ ನಿರ್ಧಾರ ತೆಗೆದುಕೊಂಡಿರುವುದರಿಂದ ಅವರನ್ನು ಈ ಹಗರಣದಲ್ಲಿ ಹೊಣೆಗಾರರನ್ನಾಗಿಸಬೇಕು ಎಂದು ಅವರು ಹೇಳಿದರು.

 ಸಚಿವರ ತಂಡವು ತರಂಗಾಂತರ ಹಂಚಿಕೆಯ ಲೈಸೆನ್ಸ್ ಅನ್ನು ಕಡಿಮೆ ಬೆಲೆಗೆ ನೀಡುತ್ತಿರುವುದರಿಂದ ಬೊಕ್ಕಸಕ್ಕೆ ಹಾನಿ ಉಂಟಾಗಲಿದೆ ಎಂದು ಪ್ರಧಾನಿ ಕಾರ್ಯದರ್ಶಿ ಬರೆದಿದ್ದ ಟಿಪ್ಪಣೆಯನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದರೆ ಈ ಹಗರಣ ನಡೆಯತ್ತಿರಲಿಲ್ಲ ಎಂದು ಗಡ್ಕರಿ ಅಭಿಪ್ರಾಯಪಟ್ಟರು.

ಪ್ರಧಾನಿ ಅವರು ಯಾರದೋ ಒತ್ತಡಕ್ಕೆ ಮಣಿದು ಪ್ರಧಾನ ಕಾರ್ಯದರ್ಶಿ ಅವರ ಟಿಪ್ಪಣೆಯನ್ನು ಕಡೆಗಣಿಸಿ 2ಜಿ ತರಂಗಾಂತರ ಹಂಚಿಕೆಗೆ ಅನುಮತಿ ನೀಡಿದ್ದರು ಎಂದು ಆರೋಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.