ADVERTISEMENT

ಅಸ್ಸಾಂನಲ್ಲಿ ನಿಲ್ಲದ ಹಿಂಸಾಚಾರ

ಪ್ರತ್ಯೇಕ ಬೋಡೊಲ್ಯಾಂಡ್ ರಾಜ್ಯದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST
ಅಸ್ಸಾಂನಲ್ಲಿ ನಿಲ್ಲದ ಹಿಂಸಾಚಾರ
ಅಸ್ಸಾಂನಲ್ಲಿ ನಿಲ್ಲದ ಹಿಂಸಾಚಾರ   

ಗುವಾಹಟಿ (ಪಿಟಿಐ): ಬೋಡೊಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರ ಶನಿವಾರ ಕೂಡ ಮುಂದುವರಿದಿದೆ. ಪ್ರತಿಭಟನಾಕಾರರು ಅನೇಕ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ, ರೈಲು ಹಳಿ ಕಿತ್ತುಹಾಕಿದರು.

ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಪಶುಸಂಗೋಪನೆ, ನೀರಾವರಿ, ಕೃಷಿ, ಆರೋಗ್ಯ, ಲೋಕೋಪಯೋಗಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಚೇರಿಗಳಿಗೆ ಶುಕ್ರವಾರ ರಾತ್ರಿ ಬೆಂಕಿ ಹೊತ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನಾಕಾರರು ದಿಫು-ದೋಲ್‌ಡೋಲಿ ರೈಲು ನಿಲ್ದಾಣಗಳ ನಡುವಿನ ಹಳಿ ಕಿತ್ತುಹಾಕಿರುವುದರಿಂದ ರೈಲು ಸಂಚಾರ ಸ್ಥಗಿತವಾಗಿಯಿತು. ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಕರ್ಫ್ಯೂವನ್ನು ಶನಿವಾರ ಸಹ ಮುಂದುವರಿಸಲಾಯಿತು.

ಸಂಯುಕ್ತ ಸಾರ್ವಜನಿಕ ಪ್ರಜಾಸತ್ತಾತ್ಮಕ ಒಗ್ಗಟ್ಟು (ಯುಪಿಡಿಎಸ್) ಒಕ್ಕೂಟವು ರಾಜ್ಯದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅಸ್ಸಾಂ ಮತ್ತು ಕೇಂದ್ರ ಸರ್ಕಾರಗಳೊಂದಿಗೆ 2011ರ ನ. 5ರಂದು ದೆಹಲಿಯಲ್ಲಿ ಮಾಡಿಕೊಂಡ ತ್ರಿಪಕ್ಷೀಯ ಒಪ್ಪಂದದ ಪ್ರತಿಯನ್ನು ದಿಫುವಿನಲ್ಲಿ ಯುಪಿಡಿಎಸ್ ಪ್ರತಿಭಟನಾಕಾರರು ಹರಿದುಹಾಕಿದರು.

ನಾಳೆಯಿಂದ ಬಂದ್‌ಗೆ ಕರೆ: ಈ ಮಧ್ಯೆ, ಪ್ರತ್ಯೇಕ ರಾಜ್ಯ ರಚನೆಗೆ ಯುಪಿಡಿಎಸ್ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯ ನೇತೃತ್ವ ವಹಿಸಿರುವ ಸ್ಥಳೀಯ ರಾಜಕೀಯ ಪಕ್ಷ ಸ್ವಾಯತ್ತ ರಾಜ್ಯ ಬೇಡಿಕೆ ಸಮಿತಿ (ಎಎಸ್‌ಡಿಸಿ), ಪರ್ವತ ರಾಜ್ಯ ಪ್ರಜಾಸತ್ತಾತ್ಮಕ ಪಕ್ಷಗಳು (ಎಚ್‌ಎಸ್‌ಡಿಪಿ)  ಕರ್ಬಿ ಅಂಗ್ಲಾಂಗ್ ಮತ್ತು ದಿಮಾಹಸೊ ಅವಳಿ ಜಿಲ್ಲೆಗಳಲ್ಲಿ ಸೋಮವಾರದಿಂದ (ಆ. 5) 100 ತಾಸುಗಳ ಕಾಲ ಬಂದ್‌ಗೆ ಕರೆ ನೀಡಿವೆ.

ಬೋಡೊಲ್ಯಾಂಡ್ ವಿರುದ್ಧ ಬಂದ್: ಬೋಡೊಲ್ಯಾಂಡ್ ರಚನೆ ವಿರೋಧಿಸಿ  ಬೋಡೊಯೇತರ 27 ಸಂಘಟನೆಗಳು ಕೊಟ್ಟಿದ್ದ 36 ತಾಸುಗಳ ಬಂದ್ ಕರೆಗೆ ಅಸ್ಸಾಂನ ಪರ್ವತ ಪ್ರದೇಶದಿಂದ ಕೆಳಭಾಗದಲ್ಲಿರುವ ಜಿಲ್ಲೆಗಳು ಸ್ಪಂದಿಸಿವೆ.

ಬಂದ್‌ನ ಮೊದಲ ದಿನವಾದ ಶನಿವಾರ ಕೆಲವು ಕಡೆ ಹಿಂಸಾಚಾರ ನಡೆದ ವರದಿಯಾಗಿದೆ. ಸಲ್‌ಬರಿ, ಬಕ್ಸಾ ಜಿಲ್ಲೆಗಳಲ್ಲಿ ವಾಹನಗಳಿಗೆ ಬೆಂಕಿ ಹೆಚ್ಚಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೊಗೊಯ್ ಎಚ್ಚರಿಕೆ: (ನವದೆಹಲಿ ವರದಿ): ಹಿಂಸಾಚಾರಕ್ಕೆ ಇಳಿದಿರುವ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್, ರಾಜ್ಯ ವಿಭಜನೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಮಾಧ್ಯಮಕ್ಕೆ ಸಲಹೆ: ಕರ್ಬಿ ಅಂಗ್ಲಾಂಗ್ ಮತ್ತು ಬೋಡೊ ಪ್ರಾದೇಶಿಕ ಸ್ವಾಯತ್ತ ಜಿಲ್ಲೆಗಳಲ್ಲಿ ಶಾಂತಿ- ಸೌಹಾರ್ದ ಸ್ಥಿತಿ ನಿರ್ಮಿಸುವುದು ತುರ್ತು ಅಗತ್ಯವಾದ ಕಾರಣ ಮಾಧ್ಯಮಗಳು ಈ ವಿಷಯದಲ್ಲಿ ಸಂಯಮದಿಂದ ವರ್ತಿಸಬೇಕು ಎಂದು ಅಸ್ಸಾಂ ಸರ್ಕಾರ ಸಲಹೆ ನೀಡಿದೆ.

ಈ ಮಧ್ಯೆ, ಮುಖ್ಯಮಂತ್ರಿ ಅವರ ಗೊಗೊಯ್ ಅವರ ಸೂಚನೆಯಂತೆ ಸಚಿವರಾದ ಪೃಥ್ವಿ ಮಜ್‌ಹಿ ಮತ್ತು ರಾಜೀವಲೋಚನ ಪೆಗು ಅವರು ಕರ್ಬಿ ಅಂಗ್ಲಾಂಗ್ ಜಿಲ್ಲೆಗೆ ಬಂದಿದ್ದು, ವಿವಿಧ ರಾಜಕೀಯ ಪಕ್ಷಗಳು ಮತ್ತು  ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.