ADVERTISEMENT

ಆಂಟನಿ ನೇತೃತ್ವದಲ್ಲಿ ಪರಾಮರ್ಶೆ ಸಮಿತಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಉಂಟಾಗಿರುವ ಹಿನ್ನಡೆಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಪರಾಮರ್ಶೆ ನಡೆಸಿದ ನಂತರ ಎಲ್ಲಾ ರಾಜ್ಯಗಳಲ್ಲಿಯೂ ಅದೇ ರೀತಿ ಪರಾಮರ್ಶೆ ನಡೆಸಲು ರಕ್ಷಣಾ ಸಚಿವ ಎ. ಕೆ. ಆಂಟನಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ.

ಈ ಸಮಿತಿಯು ಉತ್ತರಪ್ರದೇಶ, ಗೋವಾದಲ್ಲಿ ಪಕ್ಷ ಸಂಪೂರ್ಣ ನೆಲಕಚ್ಚಿರುವ  ಬಗ್ಗೆ ಹಾಗೂ ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಕಡಿಮೆ ಸ್ಥಾನಗಳನ್ನು ಪಡೆದಿರುವ ಬಗ್ಗೆ ಪರಾಮರ್ಶೆ ನಡೆಸಲಿದೆ. ಈ ಸಮಿತಿಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಕೇಂದ್ರ ಇಂಧನ ಸಚಿವ ಸುಶಿಲ್‌ಕುಮಾರ್ ಶಿಂಧೆ ಅವರೂ ಇದ್ದಾರೆ.

ಸಮಿತಿಯು ಪರಾಮರ್ಶೆ ನಡೆಸಿದ ನಂತರ ಈ ಮಾಸಾಂತ್ಯದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಲಿದೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋಲಲು ಕಾರಣಗಳಾದ ಅಂಶಗಳನ್ನು ಪತ್ತೆ ಹಚ್ಚಿ 2014ರ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಸೋನಿಯಾ ಅವರು ಪರಾಮರ್ಶೆಗೆ ಸಮಿತಿ ರಚಿಸಿದ್ದಾರೆ ಎನ್ನಲಾಗಿದೆ. ಆಂಟನಿ ನೇತೃತ್ವದ ಸಮಿತಿಯು ಈಗಾಗಲೇ ಪಂಜಾಬ್ ಮತ್ತು ಉತ್ತರಾಖಂಡದ ಕೆಲವು ಮುಖಂಡರ ಜತೆ ಮಾತುಕತೆ ನಡೆಸಿದೆ. ಇನ್ನು ಒಂದೆರಡು ದಿನಗಳಲ್ಲಿ ಉತ್ತರಪ್ರದೇಶದ ಮುಖಂಡರನ್ನೂ ಭೇಟಿ ಮಾಡಲಿದೆ.

ಉತ್ತರಪ್ರದೇಶದಲ್ಲಿ  ಪಕ್ಷದ ಸಂಘಟನೆಯಲ್ಲಿ ಭಾರಿ ಬದಲಾವಣೆ ಮಾಡಲು ಯೋಚಿಸಲಾಗುತ್ತಿದೆ. ನಾಲ್ಕು ಅಥವಾ ಐದು ಪ್ರಾದೇಶಿಕ ಸಮಿತಿಗಳನ್ನು ರಚಿಸಿ ಪಕ್ಷವನ್ನು ಬಲಪಡಿಸುವ ಯೋಚನೆ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.