ADVERTISEMENT

ಆದರ್ಶ ಹೌಸಿಂಗ್ ಹಗರಣ ನಿಯಮ ಸಡಿಲಿಸಿದ್ದು ನಿಜ -ದೇಶಮುಖ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಮುಂಬೈ: ಮಾಜಿ ಜನರಲ್‌ಗಳಾದ ದೀಪಕ್ ಕಪೂರ್ ಮತ್ತು ಎನ್. ಸಿ. ವಿಜ್ ಅವರಿಗೆ ವಿವಾದಾತ್ಮಕ ಆದರ್ಶ ಹೌಸಿಂಗ್ ಸೊಸೈಟಿಯ ಸದಸ್ಯತ್ವ ನೀಡಲು ತಾವು ನಿಯಮವನ್ನು ಸಡಿಲಿಸಿರುವುದು ನಿಜ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ಅವರು ತಿಳಿಸಿದ್ದಾರೆ.

 ಸೇನೆಯ ವಿವಿಧ ಹುದ್ದೆಗಳಲ್ಲಿ ರಾಷ್ಟ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಇಬ್ಬರಿಗೆ ಸೊಸೈಟಿ ಸದಸ್ಯತ್ವ ನೀಡಲು ನಿಯಮ ಸಡಿಲಿಸಿದ್ದು ನಿಜ ಎಂದು ದೇಶಮುಖ್ ಅವರು ಜೆ. ಎ. ಪಾಟೀಲ್ ನೇತೃತ್ವದ ವಿಚಾರಣಾ ಆಯೋಗಕ್ಕೆ ಸಲ್ಲಿಸಿರುವ 15 ಪುಟಗಳ ಪ್ರಮಾಣಪತ್ರದಲ್ಲಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ದೇಶಮುಖ್ ಅವರ ಈ ಕ್ರಮದಿಂದ ಈ ಇಬ್ಬರು ಮಾಜಿ ಜನರಲ್‌ಗಳು ಸದಸ್ಯತ್ವ ಪಡೆದು ಫ್ಲಾಟ್ ಪಡೆಯಲು ಸಾಧ್ಯವಾಯಿತು. ವಸತಿ ಕಟ್ಟಡ ನಿರ್ಮಾಣವಾಗಿರುವ ಸ್ಥಳವು ರಾಜ್ಯ ಸರ್ಕಾರಕ್ಕೆ ಸೇರಿದ್ದಾಗಿದ್ದು, ಈ ಜಾಗವನ್ನು ರಕ್ಷಣಾ ಇಲಾಖೆಯ ಸಿಬ್ಬಂದಿಗಾಗಲಿ ಅಥವಾ ಕಾರ್ಗಿಲ್ ಯುದ್ಧದಲ್ಲಿ ಹತರಾದ ಯೋಧರ ಕುಟುಂಬಗಳಿಗಾಗಿ ಮೀಸಲಿಟ್ಟರಿಲಿಲ್ಲ ಎಂದು ದೇಶಮುಖ್ ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಮುಂಬೈ ಜಿಲ್ಲಾಧಿಕಾರಿ ಅವರ ಕಚೇರಿಯ ದಾಖಲೆಗಳ ಪ್ರಕಾರ ಆದರ್ಶ ಹೌಸಿಂಗ್ ಸೊಸೈಟಿ ವಸತಿ ಕಟ್ಟಡಗಳನ್ನು ನಿರ್ಮಿಸಿರುವ ಜಾಗವು ರಾಜ್ಯ ಸರ್ಕಾರದ್ದಾಗಿದ್ದು, ಈ ಜಾಗದ ಬಗ್ಗೆ ಯಾವುದೇ ಸಂದರ್ದಲ್ಲಿಯೂ ವಿವಾದ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಗ್ರೇಟರ್ ಮುಂಬೈ ಅಭಿವೃದ್ಧಿ ಯೋಜನೆ ಅಥವಾ ಸರ್ಕಾರದ ಇನ್ನಾವುದೆ ಯೋಜನೆಯಡಿ ಕೊಲಬದಾಲ್ಲಿಯ ಜಾಗವನ್ನು ರಕ್ಷಣಾ ಇಲಾಖೆಗೆ ಮೀಸಲಿಡಲಿಲ್ಲ ಎಂದು ದೇಶಮುಖ್ ತಿಳಿಸಿದ್ದಾರೆ.ಅನುಭವಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಷರಾ ಬರೆದು ತಮ್ಮ ಮುಂದಿಟ್ಟ ನಂತವೇ ತಾವು ಕಡತವನ್ನು ಅನುಮೋದಿಸಿದ್ದು. ಆದರೆ ಆರೇಳು ವರ್ಷಗಳ ಹಿಂದೆ ಈ ಕಡತ ವಿಲೇವಾರಿಯಾಗಿರುವುದರಿಂದ ಸಂಪೂರ್ಣ ವಿವರಗಳು ಜ್ಞಾಪಕದಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ.

ಆದರೆ ಕೊಲಬಾದಲ್ಲಿಯ ಜಾಗವನ್ನು ಆದರ್ಶ ಹೌಸಿಂಗ್ ಸೊಸೈಟಿಗೆ ಮಂಜೂರು ಮಾಡುವ ನಿರ್ಧಾರವನ್ನು ಮುಂಬೈ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಆದರ್ಶ ಹೌಸಿಂಗ್ ಸೊಸೈಟಿ ಕಟ್ಟಡದ ಪಕ್ಷದಲ್ಲಿಯ ರಸ್ತೆಯ ಅಗಲವನ್ನು ಕಡಿಮೆ ಮಾಡುವ ನಿರ್ಧಾರದ ಬಗ್ಗೆ ವಿವರಣೆ ನೀಡಿರುವ ಅವರು, ಕ್ಯಾಪ್ಟನ್ ಪ್ರಕಾಶ್ ಪೇಟ್ ಮಾರ್ಗವನ್ನು ಮೊದಲಿಗೆ ವಿಸ್ತರಿಸಲು ಉದ್ದೇಶಿಸಲಾಗಿತ್ತಾದರೂ ಕೊಲಬಾ ನಗರ ಯೋಜನೆಯನ್ನು ಕೈಬಿಟ್ಟನಂತರ ರಸ್ತೆ ವಿಸ್ತೀರ್ಣದ ಪ್ರಸ್ತಾವವನ್ನೂ ಕೈಬಿಡಲಾಗಿತ್ತು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.