ADVERTISEMENT

ಆಪಾದನೆ: ಅನಾಗರಿಕ, ಅಸಂಬದ್ಧ ಪ್ರಲಾಪ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ‘ಓಟಿಗಾಗಿ ನೋಟು’ ಎಂಬ ಆಪಾದನೆಯೇ ಗೊತ್ತುಗುರಿಯಿಲ್ಲದ ಟೀಕೆ, ಇದೊಂದು ಅನಾಗರಿಕ ಮತ್ತು ಅಸಂಬದ್ಧ ಪ್ರಲಾಪ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ವಿರುದ್ಧ ಸಂಸತ್‌ನಲ್ಲಿ ಟೀಕಾ ಪ್ರಹಾರ ಮಾಡಿದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

‘2008ರಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸಂಸದರನ್ನು ಖರೀದಿಸಲಾಯಿತು ಎಂದು ವಿರೋಧ ಪಕ್ಷಗಳು ಬೊಬ್ಬೆಇಟ್ಟು ರಂಪ- ರಾಮಾಯಣ ಮಾಡುತ್ತಿರುವುದು ಪ್ರಜಾಪ್ರಭುತ್ವದಲ್ಲಿ ಅಪಾಯಕಾರಿ ಬೆಳವಣಿಗೆ’ ಎಂದು ಅವರು ದೂರಿದರು.

ಮನಮೋಹನ್ ಸಿಂಗ್ ತಮ್ಮ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಎಲ್.ಕೆ. ಅಡ್ವಾಣಿ ಅವರ ಮೇಲೆ ವಾಗ್ದಾಳಿ ನಡೆಸಿದರು. ‘ಬಿಜೆಪಿಯ ಹಿರಿಯ ಮುಖಂಡರು ಪ್ರಧಾನಿಯಾಗುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಹಾಗಿದೆ. ಪ್ರಧಾನಿ ಪಟ್ಟ ಸಿಗದ ಕಾರಣ ಅವರು ನನ್ನನ್ನು ಕ್ಷಮಿಸಿಲ್ಲ. ಅವರಿಗೆ ಪ್ರಧಾನಿ ಆಗಲೇ ಬೇಕು ಎಂಬ ಹಠವಿದ್ದರೆ ಇನ್ನು ಮೂರೂವರೆ ವರ್ಷ ಕಾಯಲಿ’ ಎಂದು ಚುಚ್ಚಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಮೇಜುಕೊಟ್ಟಿ ಹರ್ಷ ವ್ಯಕ್ತಪಡಿಸಿದರೆ, ಸೋನಿಯಾಗಾಂಧಿ ಮತ್ತು ಪ್ರಣವ್ ಮುಖರ್ಜಿ ನಕ್ಕರು. ಸ್ವತ ಅಡ್ವಾನಿ ಕೂಡ ಮುಗುಳ್ನಕರು.

ತಮ್ಮ ಸರ್ಕಾರದ ಆಗುಹೋಗುಗಳ ಬಗ್ಗೆ ಅರಿವಿಲ್ಲದ ಮೇಲೆ ಪ್ರಧಾನಿ ಹುದ್ದೆಯಲ್ಲಿ ಮನಮೋಹನ್ ಸಿಂಗ್ ಅವರು ಮುಂದುವರಿಯುವುದಾದರೂ ಯಾಕೆ ಎಂದು ಪ್ರಶ್ನಿಸಿದ ಪ್ರತಿಪಕ್ಷಗಳಿಗೆ ಉತ್ತರಿಸಿದ ಅವರು, ‘ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಅನಾಗರಿಕವಾಗಿ ಮಾಡಲಾದ ಅಸಂಬದ್ಧ ಆಪಾದನೆಗಳು ಸಂಸದೀಯ ಸಮಿತಿ ನೀಡಿರುವ ವರದಿಗೆ ಯಾವ ವಿಧದಲ್ಲಾದರೂ ತಾಳೆಯಾಗುವುದೇ ಎಂಬುದನ್ನು ಈ ಸದನವೇ ನಿರ್ಧಾರಿಸಲಿ’ ಎಂದು  ಮೇಜುಕುಟ್ಟಿ  ಸವಾಲು ಹಾಕಿದರು.

ವಿಕಿಲೀಕ್ಸ್ ಬಹಿರಂಗ ಪಡಿಸಿದ ಮಾಹಿತಿಯನ್ನು ಪ್ರಕಟಿಸಿದ ‘ದಿ ಹಿಂದೂ’ ಪತ್ರಿಕೆಯ ವರದಿಯ ಬಗ್ಗೆ ತಾವು ನೀಡಿದ ಹೇಳಿಕೆ ಕುರಿತು ಸಂಸತ್ ಎರಡೂ ಸದನಗಳಲ್ಲಿ ಸ್ಪಷ್ಟನೆ ನೀಡಿದ ಮನಮೋಹನ್ ಸಿಂಗ್, ‘ಈ ಪ್ರಕರಣದಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಅಮೆರಿಕದ ಸರ್ಕಾರ ನಡುವೆ  ನಡೆದ ಸಂವಹನದ ಸಾಚಾತವನ್ನು ಸರ್ಕಾರ ಪರಿಶೀಲಿಸಿಲ್ಲ’ ಎಂದರು.

‘ವಿಕಿಲೀಕ್ಸ್ ವೆಬ್‌ಸೈಟ್‌ನಲ್ಲಿ ಅಮೆರಿಕದೊಂದಿಗೆ  ಸಂವಹನ ನಡೆಸಲಾಗಿದೆ ಎಂಬ ಮಾಹಿತಿಯ ಸಾಚಾತನವೇ ಪ್ರಶ್ನಾರ್ಹ. ಈ ಬಗ್ಗೆ ಅಮೆರಿಕ ರಾಯಭಾರ ಕಚೇರಿಯ ಕೆಲವು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನುವುದನ್ನು ಆಲೋಚಿಸುವುದೇ ಅಪಾಯಕಾರಿ’ ಎಂದರು.

ರಾಜ್ಯಸಭೆಯಲ್ಲಿ ಜೇಟ್ಲಿ ವಾಗ್ದಾಳಿ
ನವದೆಹಲಿ (ಪಿಟಿಐ): ‘ಹಲವು ಸಂಸದರನ್ನು ಬಿಡಿ ಬಿಡಿಯಾಗಿ ಖರೀದಿಸಿದ್ದರಿಂದಲೇ’ ಯುಪಿಎ- ಐ ಉಳಿದುಕೊಂಡಿದೆ’ ಎಂದಿರುವ ಬಿಜೆಪಿ ರಾಜ್ಯಸಭೆಯಲ್ಲಿ ಬುಧವಾರ ಪ್ರಧಾನಿ ಮನ್‌ಮೋಹನ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.

 2008ರಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾವುದೇ ತಪ್ಪು ನಡೆದಿರಲಿಲ್ಲ ಎಂಬುದನ್ನು 2009ರ ಚುನಾವಣಾ ಗೆಲವು ಸಾಬೀತು ಪಡಿಸಿದೆ ಎಂಬ  ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ವಾದವನ್ನು ವಿರೋಧ ಪಕ್ಷ ಬಿಜೆಪಿ ಟೀಕಿಸಿತು. 

 ಓಟಿಗಾಗಿ ನೋಟು ಕುರಿತ ಪ್ರಧಾನಿ ಅವರ ಹೇಳಿಕೆ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಅರುಣ್‌ಜೇಟ್ಲಿ ಮಾತನಾಡಿ 2008ರಲ್ಲಿ ಎಡಪಕ್ಷಗಳು ಬೆಂಬಲ ಹಿಂದಕ್ಕೆ ಪಡೆದಿದ್ದರಿಂದ ಯುಪಿಎ-1ಗೆ ಬಹುಮತದ ಕೊರತೆ ಇತ್ತು. ಸಂಸದರನ್ನು ಖರೀದಿಸುವ ಮೂಲಕ ಕೊರತೆಯನ್ನು ನೀಗಿಸಿಕೊಂಡಿತು ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.