ADVERTISEMENT

ಆಭರಣ ವ್ಯಾಪಾರಿ ಮನೋಜ್ ಹತ್ಯೆಗೆ ಆಂಧ್ರದಲ್ಲಿ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಹೈದರಾಬಾದ್: ಬೆಂಗಳೂರಿನಲ್ಲಿ ಅಪಹರಣಕ್ಕೆ ಒಳಗಾಗಿ ಹತ್ಯೆಗೀಡಾದ ಆಂಧ್ರ ಪ್ರದೇಶದ ಆಭರಣ ವ್ಯಾಪಾರಿ ಮನೋಜ್ ಕುಮಾರ್ ಗ್ರಂಧಿ 350 ಕೋಟಿ ಆಸ್ತಿಯ `ವೈಭವ್ ಎಂಟರ್‌ಪ್ರೈಸಸ್~ನ ಮಾಲೀಕರಾಗಿದ್ದು, ಅವರ ಅಪಹರಣ ಮತ್ತು ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ವೈಭವ್ ಸಂಸ್ಥೆಯ ಎಲ್ಲಾ ಆಭರಣ ಮಳಿಗೆಗಳು ವಹಿವಾಟು ಸ್ಥಗಿತಗೊಳಿಸಿವೆ.

ವಿಜಯವಾಡ, ಗುಂಟೂರು, ರಾಜಮಂಡ್ರಿ, ಕಾಕಿನಾಡ, ವಿಜಯನಗರ ಮತ್ತು ವಿಶಾಖಪಟ್ಟಣದ ಗಜುವಾಕದಲ್ಲಿನ ಆಭರಣ ಮಳಿಗೆಗಳಲ್ಲಿ ಕೆಲಸಗಾರರು ಆತಂಕಕ್ಕೆ ಒಳಗಾಗಿ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದರು.
ಮನೋಜ್ ಕುಮಾರ್ ಅಪಹರಣ ಹಾಗೂ ಹತ್ಯೆಯ ವಿಷಯವನ್ನು ಬೆಂಗಳೂರು ಪೊಲೀಸರು ದೃಢಪಡಿಸಿದ ನಂತರ ತೀವ್ರ ಆಘಾತಕ್ಕೆ ಒಳಗಾಗಿರುವ ಅವರ ಮನೆಯಲ್ಲಿಯೂ ಸಹ ನೀರವ ಮೌನ ಆವರಿಸಿದೆ.

ವಿಶಾಖಪಟ್ಟಣದ ರಾಮಕೃಷ್ಣ ಬೀಚ್ ಸಮೀಪದ ಪಾಂಡುರಂಗಪುರ ಪ್ರದೇಶದಲ್ಲಿನ ಮನೋಜ್ ಕುಮಾರ್ ನಿವಾಸದ ಪ್ರವೇಶಕ್ಕೆ ಮಾಧ್ಯಮದವರಿಗೆ ಅವಕಾಶ ನೀಡಿರಲಿಲ್ಲ. ಅಪಾರ ಸಂಖ್ಯೆಯ ಸಂಬಂಧಿಕರು, ಸ್ನೇಹಿತರು ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಶುಕ್ರವಾರ ವಿಶೇಷ ವಿಮಾನದ ಮೂಲಕ ಮನೋಜ್ ಕುಮಾರ್ ಶವವನ್ನು ವಿಶಾಖಪಟ್ಟಣಕ್ಕೆ ತರಲಾಯಿತು. ನಂತರ `ವಿ ಸ್ಕ್ವೇರ್ ಮಳಿಗೆ~ ಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ಬಳಿಕ ಚಾವುಲಮಾದಂ ಸ್ಮಶಾನಕ್ಕೆ ಬೃಹತ್ ಮೆರವಣಿಗೆಯಲ್ಲಿ ಶವವನ್ನು ಕೊಂಡೊಯ್ದು ಅಂತಿಮ ಸಂಸ್ಕಾರ ನಡೆಸಲಾಯಿತು.

ಬೆಂಗಳೂರಿನ ಆಭರಣ ಪ್ರದರ್ಶನದಲ್ಲಿ ಕೆಲವು ಆಭರಣಗಳನ್ನು ಖರೀದಿಸುವ ಮುನ್ನ ಮನೋಜ್ ಕುಮಾರ್ ಜೈಪುರ ಮತ್ತು ಹೈದರಾಬಾದ್‌ನಲ್ಲಿಯೂ ಆಭರಣ ಖರೀದಿಸಿದ್ದರು. ವೈಭವ್ ಗ್ರೂಪ್ ಪರವಾಗಿ ಜಾಹಿರಾತು ಸಿದ್ಧಪಡಿಸಲು ಈ ಆಭರಣಗಳನ್ನು ಖರೀದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.