ನವದೆಹಲಿ (ಪಿಟಿಐ): `ಈಗ ನಾಯಕರು ಮತ್ತು ಸಾಮಾನ್ಯರ ನಡುವಿನ ಹೋರಾಟ ಆರಂಭವಾಗಿದೆ' ಎಂದು ಹೇಳುವ ಮೂಲಕ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ತಮ್ಮ `ಆಮ್ ಆದ್ಮಿ' ರಾಜಕೀಯ ಪಕ್ಷವನ್ನು ಸೋಮವಾರ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ರಾಜಧಾನಿಯ ಸಂಸತ್ ವೃತ್ತದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರ ಎದುರು ಹೊಸ ಪಕ್ಷ ಉದ್ಘಾಟಿಸಿ ಮಾತನಾಡಿದ ಅವರು, `ತಮ್ಮ ಈ ನೂತನ ಪಕ್ಷ ಭ್ರಷ್ಟಾಚಾರ ವಿರುದ್ಧದ ಹೋರಾಟದ ಫಲಿತಾಂಶವಾಗಿದೆ' ಎಂದು ಹೇಳಿದರು.
ರಾಜಕೀಯ ಅನುಭವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಇಂದಿನ ರಾಜಕಾರಣಿಗಳಂತೆ ನನಗೆ ಭ್ರಷ್ಟಾಚಾರ ಮತ್ತು ಅಪರಾಧ ದಾಖಲೆಗಳ ಬಗ್ಗೆ ಅನುಭವವಿಲ್ಲ. ಅಲ್ಲದೆ, ಅಂತಹ ಅನುಭವವನ್ನು ಬಯಸುವುದೂ ಇಲ್ಲ' ಎಂದು ವ್ಯಂಗ್ಯವಾಗಿ ಉತ್ತರಿಸಿದರು.
ಹೊಸ ಪಕ್ಷ ಉದ್ಘಾಟನೆಗೂ ಮುನ್ನ ಕೇಜ್ರಿವಾಲ್ ಮತ್ತು ಸಂಗಡಿಗರು ರಾಜ್‌ಘಾಟ್ ಮತ್ತು ಅಂಬೇಡ್ಕರ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
1949ರ ನವೆಂಬರ್ 26ರಂದು ದೇಶ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನೇ, ಇಂದು ಕೇಜ್ರಿವಾಲ್ ತಮ್ಮ ಪಕ್ಷದ ಅಧಿಕೃತ ಉದ್ಘಾಟನೆಗೆ ಆರಿಸಿಕೊಂಡಿರುವುದು ವಿಶೇಷವಾಗಿತ್ತು. ಇದೇ ವೇಳೆ ಕೇಜ್ರಿವಾಲ್ ಮತ್ತು ಅವರ ಸಂಗಡಿಗರು 26/11 ದಾಳಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿ ಮಡಿದ ಎನ್‌ಎಸ್‌ಜಿ ಕಮಾಂಡೊಗಳಿಗೆ ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.