ನವದೆಹಲಿ: ಸೋಮವಾರ ಕೇಂದ್ರ ಸಂಪುಟ ಪುನರ್‌ರಚನೆ ಆಗಲಿದ್ದು, ಗಾಂಧಿ ಕುಟುಂಬದ ನಿಷ್ಠಾವಂತ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ.
ಆಸ್ಕರ್ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಇದಕ್ಕೆ ಪುಷ್ಟಿ ನೀಡುವಂತೆ ಭಾನುವಾರ ನಡೆದ ಕಾಂಗ್ರೆಸ್ ಸಂಘಟನಾ ಸಭೆಯಲ್ಲಿ ಆಸ್ಕರ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಮೊದಲ ಅವಧಿಯ ಯುಪಿಎ ಸರ್ಕಾರದಲ್ಲಿ ಅವರು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿ (ಸ್ವತಂತ್ರ) ಕಾರ್ಯನಿರ್ವಹಿಸಿದ್ದಾರೆ.
ಈ ಬಾರಿಯ ಸಂಪುಟ ಪುನರ್‌ರಚನೆಯಲ್ಲಿ ಕರ್ನಾಟಕದಿಂದ ಕೇವಲ ಆಸ್ಕರ್ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಂ ರಮೇಶ್ ಅವರ ಖಾತೆಗಳು ಬದಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ರೈಲ್ವೆ ಖಾತೆಗೆ ಖರ್ಗೆ ಅಥವಾ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರ ಹೆಸರು ಕೇಳಿಬರುತ್ತಿವೆ.
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಿಕಟರಾಗಿರುವ ಮೀನಾಕ್ಷಿ ನಟರಾಜನ್ ಅವರೂ ಸಂಪುಟ ಸೇರುವ ಸಾಧ್ಯತೆ ಇದೆ. ಮಾಕನ್, ಜೋಷಿ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ : ರೈಲ್ವೆ ಸಚಿವ ಸ್ಥಾನಕ್ಕೆ ಭಾನುವಾರ ಸಿ.ಪಿ. ಜೋಷಿ ನೀಡಿರುವ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಂಗೀಕರಿಸಿದ್ದಾರೆ. ಶನಿವಾರ ಪದತ್ಯಾಗ ಮಾಡಿದ್ದ ಅಜಯ್ ಮಾಕನ್ ರಾಜೀನಾಮೆ ಯನ್ನೂ ಅಂಗೀಕರಿಸಲಾಗಿದೆ.
ಮುಂದಿನ ವರ್ಷ ನಡೆಯಲಿರುವ ದೆಹಲಿ ಮತ್ತು ರಾಜಸ್ತಾನ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ಸಂಘಟನಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನವದೆಹಲಿ ಮತ್ತು ಭಿಲ್ವಾರ ಕ್ಷೇತ್ರಗಳ ಕಾಂಗ್ರೆಸ್ ಸಂಸದರಾದ ಮಾಕನ್ ಮತ್ತು ಜೋಷಿ ಸಚಿವ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸ್ದ್ದಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.