ADVERTISEMENT

ಆಸ್ತಿ ಘೋಷಣೆ: ಈಗ ಐಎಎಸ್ ಅಧಿಕಾರಿಗಳ ಸರದಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 19:30 IST
Last Updated 11 ಏಪ್ರಿಲ್ 2011, 19:30 IST

ನವದೆಹಲಿ: ಭಾರಿ ಹಗರಣಗಳು ಮತ್ತು ಭ್ರಷ್ಟಾಚಾರದಿಂದ ಬೇಸತ್ತ ಜನರು ಬೀದಿಗಿಳಿದ ಬೆನ್ನಲ್ಲೇ ಭಾರತೀಯ ನಾಗರಿಕ ಸೇವೆ (ಐಎಎಸ್) ಮತ್ತು ಕೇಂದ್ರ ಸೇವೆಯಲ್ಲಿರುವ ಇನ್ನಿತರ ಅಧಿಕಾರಿಗಳು ತಮ್ಮ ಆದಾಯ ಮತ್ತು ಆಸ್ತಿ ವಿವರಣೆ ಘೋಷಿಸುವಂತೆ ಕೇಂದ್ರ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.ಆಡಳಿತದ ಪ್ರತಿ ಹಂತದಲ್ಲೂ ಪಾರದರ್ಶಕತೆ ತರಲು ಮುಂದಾಗಿರುವ ಸರ್ಕಾರ ಏಪ್ರಿಲ್ 20ರ ಒಳಗೆ ವಾರ್ಷಿಕ ಆದಾಯ ಮತ್ತು ಆಸ್ತಿ ಘೋಷಣೆ ಮಾಡುವಂತೆ ದೇಶದ ಎಲ್ಲ ಐಎಎಸ್ ಅಧಿಕಾರಿಗಳಿಗೆ ಸೂಚಿಸಿದೆ. 2011, ಜನವರಿ 1ಕ್ಕೆ ಅನ್ವಯವಾಗುವಂತೆ ಅಧಿಕಾರಿಗಳು ತಾವು ಹೊಂದಿರುವ ಆಸ್ತಿ, ಆದಾಯ ಘೋಷಣಾ ಪ್ರಮಾಣ ಪತ್ರಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಲ್ಲಿಸುವಂತೆ ಹೆಚ್ಚುವರಿ ಕಾರ್ಯದರ್ಶಿ ಡಾ.ಐ.ವಿ. ಸುಬ್ಬಾರಾವ್ ಕೋರಿದ್ದಾರೆ.
 

ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಅವರು ಈಗಾಗಲೇ ಆದೇಶ ಪತ್ರ ರವಾನಿಸಿದ್ದು, ನಿಗದಿತ ಅವಧಿಯೊಳಗೆ ಆದಾಯ ಮತ್ತು ಆಸ್ತಿ ಘೋಷಣೆ ಮಾಡದಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಆಸ್ತಿ ಘೋಷಿಸಿಕೊಳ್ಳದ ಅಧಿಕಾರಿಗಳನ್ನು ಬಡ್ತಿ ಮತ್ತು ಭಾರತ ಸರ್ಕಾರದ ಉನ್ನತ ಹುದ್ದೆಗಳ ನೇಮಕಕ್ಕೆ ಪರಿಗಣಿಸಲಾಗುವುದಿಲ್ಲ. ಆ ಅಧಿಕಾರಿಗಳ ಹೆಸರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದೂ ಎಚ್ಚರಿಸಲಾಗಿದೆ.
 

ಈತನಕ ಭ್ರಷ್ಟಾಚಾರ ಆರೋಪ ಕೇಳಿಬಂದ ಸಂದರ್ಭದಲ್ಲಿ ಅಥವಾ ಅಪರಾಧ ಪ್ರಕರಣಗಳ ತನಿಖೆ ವೇಳೆ ಮಾತ್ರ ಅಧಿಕಾರಿಗಳ ಆಸ್ತಿ ಘೋಷಣೆ ಕುರಿತು ಕೂಲಂಕಷ ಪರಿಶೀಲನೆ ನಡೆಯುತಿತ್ತೇ ಹೊರತು, ಸಾರ್ವಜನಿಕರಿಗೆ ಆ ವಿಷಯವನ್ನು ಬಹಿರಂಗ ಪಡಿಸುತ್ತಿರಲಿಲ್ಲ. ಅಧಿಕಾರಿಗಳ ಆಸ್ತಿ ವಿವರಣೆ ಮಾಹಿತಿ ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯಿದೆಯ ಅಡಿ ಸಲ್ಲಿಸಲಾದ ಅನೇಕ ಅರ್ಜಿಗಳನ್ನು ಕೂಡ ಗೌಪ್ಯತೆಯ ದೃಷ್ಟಿಯಿಂದ ತಿರಸ್ಕರಿಸಲಾಗಿತ್ತು.
 

ADVERTISEMENT

ಆದರೆ, ಇದೀಗ ಭ್ರಷ್ಟಾಚಾರ ವಿರುದ್ಧ ದೇಶಾದ್ಯಂತ ಜನಾಂದೋಲನ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ  ಒತ್ತಡ ಹೆಚ್ಚಾಗಿದೆ. ಹೀಗಾಗಿ ಅದು ಐಎಎಸ್ ಮತ್ತು ಕೇಂದ್ರ ಸೇವೆಯಲ್ಲಿರುವ ಹಿರಿಯ ಅಧಿಕಾರಿಗಳ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸುವ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
 

ಈ ಮಧ್ಯೆ ಬಿಹಾರ ಮತ್ತು ಛತ್ತೀಸ್‌ಗಡ ಕೇಡರ್ ಐಎಎಸ್ ಅಧಿಕಾರಿಗಳು ಆ ರಾಜ್ಯಗಳ ನಿರ್ದೇಶನದ ಮೇರೆಗೆ ಈಗಾಗಲೇ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಕೊಂಡಿದ್ದಾರೆ. ಇನ್ನೂ ಕೆಲವು ರಾಜ್ಯಗಳು ಐಎಎಸ್ ಅಧಿಕಾರಿಗಳ ಆಸ್ತಿ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಮಾದರಿಯಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗಳಿಗೆ ಈ ನಿರ್ಧಾರ ಕೈಗೊಳ್ಳದ ಹೊರತಾಗಿ ಅನ್ಯ ಮಾರ್ಗಗಳು ಉಳಿದಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.