ADVERTISEMENT

ಇಂದು ಫಲಿತಾಂಶ

ದೆಹಲಿ, ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಡ.

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ದೆಹಲಿ, ಮಧ್ಯ­ಪ್ರದೇಶ, ರಾಜಸ್ತಾನ ಮತ್ತು ಛತ್ತೀಸ­ಗಡ ರಾಜ್ಯ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಭಾನುವಾರ (ಡಿ. 8) ಹೊರಬೀಳಲಿದೆ. ಈಶಾನ್ಯದ ಮಿಜೋರಾಂ ವಿಧಾನ­ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮಾತ್ರ ಸೋಮವಾರ (ಡಿ. 9) ನಡೆಯಲಿದೆ.

ಎಣಿಕೆ ಕಾರ್ಯ ಎಲ್ಲೆಡೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ವಿದ್ಯು­ನ್ಮಾನ ಮತಯಂತ್ರಗಳಿರುವ ಕಾರಣ ಮಧ್ಯಾಹ್ನದ ಒಳಗಾಗಿ ಬಹುತೇಕ ಫಲಿತಾಂಶ ದೊರೆಯುವ ಸೂಚನೆ­ಗಳಿವೆ. ಮುಂಬರುವ ಲೋಕಸಭಾ ಚುನಾ­ವ­ಣೆಯ ‘ಉಪಾಂತ್ಯ ಪಂದ್ಯ’ ಎಂದೇ ಈ ಚುನಾವಣೆಯನ್ನು ಬಿಂಬಿಸಲಾ­ಗುತ್ತಿದೆ. ದೆಹಲಿಯಲ್ಲಿ ಶೇ 61, ರಾಜಸ್ತಾನ­ದಲ್ಲಿ  ಶೇ 74, ಮಧ್ಯಪ್ರದೇಶ ಮತ್ತು ಛತ್ತೀ­ಸಗಡದಲ್ಲಿ ತಲಾ ಶೇ 70, ಮಿಜೋರಾಂನಲ್ಲಿ ದಾಖಲೆಯ ಶೇ 81ರಷ್ಟು ಮತದಾನ ದಾಖಲಾಗಿತ್ತು.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ತನ್ನ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಘೋಷಿ­ಸಿದ ಬಳಿಕ ನಡೆದ ಈ ಚುನಾ­ವಣೆಯಲ್ಲಿ ಪಕ್ಷದ ಪ್ರದರ್ಶನ ಬಗ್ಗೆ ಕುತೂಹಲ ಕೆರ­ಳಿದೆ. ಹೀಗಾಗಿ ಭಾನು­ವಾರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದೇ ರೀತಿ ಕಾಂಗ್ರೆಸ್‌ ಈ ಚುನಾ­ವಣೆ­ಯಲ್ಲಿ ತೋರುವ ಪ್ರದರ್ಶನವು ಆ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಸಾಮರ್ಥ್ಯವನ್ನೂ ಒರೆಗೆ ಹಚ್ಚಲಿದೆ.

ವಸುಂಧರಾ ರಾಜೆ (ರಾಜಸ್ತಾನ), ರಮಣಸಿಂಗ್‌ (ಛತ್ತೀಸಗಡ), ಶಿವ­ರಾಜ ಸಿಂಗ್‌ (ಮಧ್ಯಪ್ರದೇಶ), ಹರ್ಷ­ವರ್ಧನ್‌, ಶೀಲಾ ದೀಕ್ಷಿತ್‌ ಮತ್ತು  ಅರ­ವಿಂದ ಕೇಜ್ರಿವಾಲ್‌ (ದೆಹಲಿ) ಭವಿಷ್ಯ ನಿರ್ಧಾರವಾಗಲಿದೆ. ಬಹುತೇಕ ಮತಗಟ್ಟೆ ಸಮೀಪ ಸಮೀ­ಕ್ಷೆ­ಗಳು ಮಧ್ಯಪ್ರದೇಶ, ಛತ್ತೀಸಗ­ಡ­ಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊ­ಳ್ಳ­­ಲಿದೆ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್‌­­ನಿಂದ ಅಧಿಕಾರ ಕಸಿದುಕೊ­ಳ್ಳಲಿದೆ ಎಂದು ಅಂದಾ­ಜಿಸಿವೆ. ದೆಹಲಿ­ಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಬ­ಹುದು ಎಂದು ಹೇಳಿವೆ.

ಲೋಕಸಭೆಯತ್ತ ಚಿತ್ತ
ನವದೆಹಲಿ:
ನಾಲ್ಕು ರಾಜ್ಯ­ಗಳ ವಿಧಾನ­ಸಭಾ ಚುನಾ­ವಣೆಯಲ್ಲಿ ಪಕ್ಷದ ನಿರಾ­ಶಾದಾಯಕ ಪ್ರದರ್ಶನದ ಮುನ್ಸೂ­ಚನೆ ವಿವಿಧ ಮತಗಟ್ಟೆ ಸಮೀಕ್ಷೆಗಳು ನೀಡಿರು­ವಂತೆಯೇ ಕಾಂಗ್ರೆಸ್‌, ಈ ಫಲಿತಾಂಶದ ಬಗ್ಗೆ ತಲೆ­ಕೆಡಿಸಕೊಳ್ಳದೆ ಮುಂಬರುವ ಲೋಕಸಭಾ ಚುನಾವ­ಣೆ­­ಯತ್ತ ಚಿತ್ತ ಹರಿಸಲು ಬಯಸಿದೆ.
ಪ್ರಾಂತೀಯ ಚುನಾವಣಾ ಫಲಿ­ತಾಂಶ­ಗಳು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿ­­ರುವ ಪಕ್ಷವು, ಇದಕ್ಕೆ ಪೂರಕ­ವಾಗಿ ಈ ಹಿಂದಿನ ಉದಾಹರ­ಣೆಗಳನ್ನು ಉಲ್ಲೇಖಿಸಿದೆ.

‘ಚುನಾವಣೋತ್ತರ ಮತ್ತು ಮತ­ಗಟ್ಟೆ ಸಮೀಕ್ಷೆಗಳು ನಿಜವಾದರೂ ಸಂಭ್ರ­­­ಮಾಚರಣೆ ಮಾಡುವಾಗ ಬಿಜೆಪಿ ಎಚ್ಚ­ರಿಕೆ­ಯಿಂದ ಇರಬೇಕು. 1998, 1999­ರಲ್ಲಿ ಈ ನಾಲ್ಕು ರಾಜ್ಯ­­ಗಳಲ್ಲಿ ನಾವೂ ಗೆದ್ದಿ­ದ್ದೆವು. ಆದರೆ 1999ರ ಲೋಕ­ಸಭಾ ಚುನಾ­ವಣೆ ನಮ್ಮ ಕಣ್ಣು ತೆರೆ­ಸಿತ್ತು’ ಎಂದು ಪಕ್ಷದ ದೆಹಲಿ ಉಸ್ತು­ವಾರಿ ಹೊತ್ತಿ­ರುವ ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ಶಕೀಲ್‌ ಅಹ್ಮದ್‌ ಹೇಳಿದ್ದಾರೆ.

‘1998, 1999ರಲ್ಲಿ ನಾವು ದೆಹಲಿ, ಮಧ್ಯಪ್ರದೇಶ, ರಾಜಸ್ತಾನ, ಛತ್ತೀ­ಸ­ಗಡ ವಿಧಾನಸಭಾ ಚುನಾ­ವಣೆ­ಗಳಲ್ಲಿ ಗೆದ್ದಿದ್ದರೂ, 1999ರ ಲೋಕ­ಸಭಾ ಚುನಾ­ವಣೆ­ಯಲ್ಲಿ ಅಟಲ್‌ ಬಿಹಾರಿ ವಾಜ­ಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು’ ಎಂದು ನೆನಪಿಸಿದ್ದಾರೆ.

ದೆಹಲಿ ವಿಧಾಸಭೆಯ (70) ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮತ್ತು ಎಎಪಿ ಸ್ಪರ್ಧಿಸಿವೆ. ಬಿಜೆಪಿ 66 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 4 ಸ್ಥಾನಗಳನ್ನು ಮಿತ್ರಪಕ್ಷ ಎಸ್‌ಎಡಿಗೆ ಬಿಟ್ಟುಕೊಟ್ಟಿದೆ. ಒಟ್ಟಾರೆ ಇಲ್ಲಿ 810 ಸ್ಫರ್ಧಿಗಳು ಕಣದಲ್ಲಿದ್ದಾರೆ. ಮಧ್ಯಪ್ರದೇಶದ ಎಲ್ಲಾ (230) ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧಿಸಿದೆ.  ಕಾಂಗ್ರೆಸ್‌ 229 ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ADVERTISEMENT

ಒಟ್ಟಾರೆ 2,583 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜಸ್ತಾನದ ಎಲ್ಲಾ (200) ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಒಟ್ಟಾರೆ 2,087 ಸ್ಪರ್ಧಿಗಳು ಕಣದಲ್ಲಿದ್ದಾರೆ. ಛತ್ತೀಸಗಡದ ಎಲ್ಲ  ಕ್ಷೇತ್ರಗಳಲ್ಲೂ (90) ಕಾಂಗ್ರೆಸ್‌ ಮತ್ತು ಬಿಜೆಪಿ ಸ್ಪರ್ಧಿಸಿವೆ. ಒಟ್ಟಾರೆ 986 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.