ADVERTISEMENT

ಇಬ್ಬರು ಪತ್ರಕರ್ತರ ಶಂಕಾಸ್ಪದ ಸಾವು

ಪಿಟಿಐ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ಭಿಂಡ್‌ (ಮಧ್ಯಪ್ರದೇಶ)/ ಆರಾ (ಬಿಹಾರ): ಸೋಮವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇಬ್ಬರೂ ಪತ್ರಕರ್ತರ ಕುಟುಂಬದವರು, ಇದು ಅಪಘಾತವಲ್ಲ, ವ್ಯವಸ್ಥಿತ ಕೊಲೆ ಎಂದು ಆರೋಪ ಮಾಡಿದ್ದಾರೆ. 

ಮರಳು ಗಣಿಗಾರಿಕೆ ಅಕ್ರಮದ ಕುರಿತು ಕುಟುಕು ಕಾರ್ಯಾಚರಣೆ ನಡೆಸಿ ವರದಿ ಮಾಡಿದ್ದ ಭಿಂಡ್‌ನ ಸ್ಥಳೀಯ ಟಿವಿ ವಾಹಿನಿ ವರದಿಗಾರ ಸಂದೀಪ್‌ ಶರ್ಮಾ ಅವರ ಮೇಲೆ ಸೋಮವಾರ ಟ್ರಕ್‌ ಹರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.

‘ಇಲ್ಲಿನ ಅತೇರ್‌ ರಸ್ತೆಯ ಪೊಲೀಸ್‌ ಠಾಣೆಯ ಮುಂಭಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಸಂದೀಪ್‌ ಅವರ ಮೇಲೆ ಮರಳು ಸಾಗಣೆ ಟ್ರಕ್‌ ಹರಿದಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಮರಳು ಮಾಫಿಯಾದವರು ನನ್ನನ್ನು ಕೊಲ್ಲಬಹುದು. ಸೂಕ್ತ ಭದ್ರತೆ ಒದಗಿಸಿ’ ಎಂದು ಮಧ್ಯಪ್ರದೇಶದ ಪೊಲೀಸ್‌ ಮಹಾನಿರ್ದೇಶಕರು ಮತ್ತು ಮಾನವಹಕ್ಕುಗಳ ಆಯೋಗಕ್ಕೆ ಈಚೆಗೆ ಸಂದೀಪ್‌ ಮನವಿ ಮಾಡಿದ್ದರು ಎಂದು ಸಂದೀಪ್‌ ಅವರ ಸೋದರ ಸಂಬಂಧಿ ವಿಕಾಸ್‌ ಪುರೋಹಿತ್‌ ಕೊಟ್ವಾಲಿ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಮರಳು ಗಣಿಗಾರಿಕೆ ಅಕ್ರಮ ಮತ್ತು ಅಕ್ರಮದಲ್ಲಿ ಉಪಪ್ರಾಂತೀಯ ಪೊಲೀಸ್‌ ಅಧಿಕಾರಿಯ ಪಾತ್ರದ ಕುರಿತು ಸಂದೀಪ್‌ ವರದಿ ಮಾಡಿದ್ದರು. ವರದಿ ಪ್ರಕಟವಾದ ನಂತರ ಆ ಪೊಲೀಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಈ ಬೆಳವಣಿಗೆಗಳ ನಂತರ ಸಂದೀಪ್‌ಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಪುರೋಹಿತ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

‘ಅಪಘಾತದ ನಂತರ ಟ್ರಕ್‌ ಚಾಲಕ ನಾಪತ್ತೆಯಾಗಿದ್ದಾನೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಲಾಗಿದೆ. ಸೆಕ್ಷನ್‌ 304ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಭಿಂಡ್‌ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್‌ ಖರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.