ADVERTISEMENT

ಈರುಳ್ಳಿ ಕೃತಕ ಅಭಾವ: ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಈರುಳ್ಳಿ ಆವಕ ಕಡಿಮೆ ಆಗಿರುವುದನ್ನೇ ನೆಪವಾಗಿಟ್ಟು ಕೊಂಡು ವರ್ತಕರು ಮತ್ತು ಸಟ್ಟಾ ವಹಿವಾಟುದಾರರು ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬುಧವಾರ ನಿರ್ದೇಶನ ನೀಡಿದೆ.

ದೇಶದಾದ್ಯಂತ ಜುಲೈ ತಿಂಗಳಿನಿಂದ ಸಗಟು ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಈರುಳ್ಳಿ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ರಾಜಧಾನಿ ನವದೆಹಲಿಯಲ್ಲಿ ಚಿಲ್ಲರೆ ವ್ಯಾಪಾರಿಗಳು ಒಂದು ಕೆ.ಜಿ. ಈರುಳ್ಳಿಗೆ ` 80ರ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಈರುಳ್ಳಿ ಉತ್ಪಾದನೆ ಕಡಿಮೆ ಇರುವ ಕಾಲದಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಸುತ್ತಿರುವ ವ್ಯಾಪಾರಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದಾರೆ.

ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಹಾಗೂ ಪ್ರಮುಖ ತರಕಾರಿ ಆಗಿರುವ ಈರುಳ್ಳಿಯ ಕೊರತೆ ಉಂಟಾಗದಂತೆ ಮಹಾರಾಷ್ಟ್ರ ನಿಗದಿತವಾಗಿ ಈರುಳ್ಳಿ ಸರಬರಾಜು ಮಾಡಬೇಕು. ಬೆಲೆ ಏರಿಕೆ ಕಾರಣದಿಂದ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಲ್ಲಿ, ಈ ಕುರಿತು ಸರ್ಕಾರಕ್ಕೆ ತಕ್ಷಣವೇ ಮಾಹಿತಿ ನೀಡಬೇಕು ಎಂದೂ ಸಚಿವಾಲಯ ಸೂಚಿಸಿದೆ.

ಈರುಳ್ಳಿ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಉಂಟಾಗುತ್ತಿದ್ದು, ಕಳೆದ ವರ್ಷ (2012) ಸಂಗ್ರಹಿಸಿಡಲಾಗಿದ್ದ ಈರುಳ್ಳಿಯಲ್ಲಿ ಶೇ 90ರಷ್ಟು ದಾಸ್ತಾನು ಮುಗಿದಿದ್ದು, ಪ್ರಸ್ತುತ ಒಟ್ಟು 34 ಲಕ್ಷ ಟನ್‌ ಮಾತ್ರ ದಾಸ್ತಾನು ಇದೆ. 2013ರಲ್ಲಿ 27.5 ಲಕ್ಷ ಟನ್‌ ಈರುಳ್ಳಿ ದಾಸ್ತಾನು ಇದರಲ್ಲಿ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.