ADVERTISEMENT

ಈರುಳ್ಳಿ ರಫ್ತು ನಿಷೇಧ ರದ್ದು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ನವದೆಹಲಿ: ಬೆಳೆಗಾರರ ತೀವ್ರ ವಿರೋಧ  ಮತ್ತು ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಮಂಗಳವಾರ ರದ್ದುಗೊಳಿಸಿದೆ.

ಈ ನಿರ್ಧಾರದಿಂದ ರೈತರಿಗೆ ನೆರವಾಗದಿದ್ದರೂ ಈರುಳ್ಳಿಯ ಚಿಲ್ಲರೆ ಮಾರಾಟ ದರ ಹೆಚ್ಚಲು ಕಾರಣವಾಗಲಿದೆ. ಆಹಾರಕ್ಕೆ ಸಂಬಂಧಿಸಿದ ಹಿರಿಯ ಸಚಿವರನ್ನು ಒಳಗೊಂಡ ಸಮಿತಿಯು, ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿತು.

ಇದೊಂದು ಸಕಾಲಿಕ ನಿರ್ಧಾರವಾಗಿದೆ ಎಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಬೆಳೆಗಾರರು ಸ್ವಾಗತಿಸಿದ್ದಾರೆ. ನಿಷೇಧದ ಫಲವಾಗಿ ಬೆಳೆಗಾರರು ಅಂದಾಜು ರೂ.150 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿದ್ದಾರೆ.

`ಈರುಳ್ಳಿ ರಫ್ತು ಮೇಲಿನ ನಿಷೇಧ ರದ್ದುಗೊಳಿಸಲಾಗಿದೆ. ಹದಿನೈದು ದಿನಗಳ ನಂತರ ಮತ್ತೆ ಪರಿಸ್ಥಿತಿ ಪರಾಮರ್ಶಿಸಲಾಗುವುದು~ ಎಂದು ಆಹಾರ ಸಚಿವ ಕೆ. ವಿ. ಥಾಮಸ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಪೂರೈಕೆ ಪ್ರಮಾಣ ಕಡಿಮೆಯಾಗಿ ನವದೆಹಲಿಯಲ್ಲಿ ಈರುಳ್ಳಿ ಬೆಲೆಯು ಅತ್ಯಲ್ಪ ಅವಧಿಯಲ್ಲಿ  ಪ್ರತಿ ಕೆಜಿಗೆ ರೂ.15ರಿಂದ ರೂ.25ಕ್ಕೆ ತಲುಪಿತ್ತು. ಈ ಹಿನ್ನೆಲೆಯಲ್ಲಿ, ದೇಶದ ಇತರ ಭಾಗದಲ್ಲಿಯೂ ಬೆಲೆ ಪರಿಸ್ಥಿತಿ ಕೈಮೀರಿ ಹೋಗಬಾರದು ಮತ್ತು ಸ್ಥಳೀಯ  ಮಾರುಕಟ್ಟೆಗಳಲ್ಲಿ ಲಭ್ಯತೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ತಿಂಗಳ 9ರಂದು ರಫ್ತು ನಿಷೇಧ ಆದೇಶ ಹೊರಡಿಸಿತ್ತು.
ರಫ್ತು ನಿಷೇಧ ಜಾರಿಗೆ ಬರುತ್ತಿದ್ದಂತೆ ದೆಹಲಿಯಲ್ಲಿ ಬೆಲೆಯು ಪ್ರತಿ ಕೆಜಿಗೆ ರೂ.2 ರಿಂದ ರೂ.5ರಂತೆ ಕಡಿಮೆಯಾಗಿತ್ತು. 

ರಫ್ತು ಉತ್ಸಾಹ ಕುಗ್ಗಿಸಲು ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್‌ಗೆ 475 ಡಾಲರ್‌ಗಳಿಗೆ (ರೂ.22,800) ನಿಗದಿ ಮಾಡಲಾಗಿದೆ. ರಫ್ತು ನಿಷೇಧ ಆದೇಶ ಹೊರಡಿಸಿದಾಗಲೂ `ಎಂಇಪಿ~ ಇದೇ ದರದಲ್ಲಿತ್ತು. ಪ್ರತಿ 15 ದಿನಗಳಿಗೊಮ್ಮೆ `ಎಂಇಪಿ~ ಪರಾಮರ್ಶಿಸಲಾಗುವುದು ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.

ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಎರಡು ಮೂರು ವಾರಗಳ ಹಿಂದೆ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಕಂಡು ಬಂದಿತ್ತು.

ಬೆಳೆಗಾರರ ಪ್ರತಿಭಟನೆ: ಕರ್ನಾಟಕ ಮತ್ತು ಮಹಾರಾಷ್ಟ್ರದ ಬೆಳೆಗಾರರಿಂದ ರಫ್ತು ನಿಷೇಧಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಈ ನಿರ್ಧಾರದಿಂದ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಬೆಲೆ  ದೊರೆಯುವುದಿಲ್ಲ ಎಂದು ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ತಮ್ಮ ಆಕ್ರೋಶದ ಪ್ರತೀಕವಾಗಿ ಬೆಳೆಗಾರರು ಅನೇಕ ಕಡೆಗಳಲ್ಲಿ ಮಾರುಕಟ್ಟೆಗೆ ಈರುಳ್ಳಿ ತರುವುದನ್ನೂ ನಿಲ್ಲಿಸಿದ್ದರು.  ಬೆಳೆಗಾರರ ಪ್ರತಿಭಟನೆ ಕಾರಣಕ್ಕೇನೆ ಸರ್ಕಾರ ರಫ್ತು ನಿಷೇಧ ಬಗ್ಗೆ ಮರು ಚಿಂತನೆ ನಡೆಸಿತ್ತು.

ಹಬ್ಬಹರಿದಿನಗಳಲ್ಲಿ ಈರುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡುಬರುವುದು ಮತ್ತು ಬೆಲೆಗಳು ನಾಗಾಲೋಟದಲ್ಲಿ ಏರುವುದು ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ನೋಟವಾಗಿದೆ.

ಭಾರತವು ಪ್ರಮುಖವಾಗಿ  ಮಲೇಷ್ಯಾ, ಶ್ರೀಲಂಕಾ, ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತಿದೆ. ಸಕ್ಕರೆಯ ಸಂಗ್ರಹ ಮಿತಿಯನ್ನು ಎರಡು ತಿಂಗಳವರೆಗೆ ನಿಗದಿಪಡಿಸಿರುವುದನ್ನು ಸಚಿವರ ತಂಡವು ನವೆಂಬರ್ 30ರವರೆಗೆ ವಿಸ್ತರಿಸಿದೆ.

ಖಾದ್ಯ ತೈಲ, ಎಣ್ಣೆಬೀಜ ಮತ್ತು ಬೇಳೆಕಾಳುಗಳ ಸಂಗ್ರಹ ಮಿತಿಯನ್ನು ಮುಂದಿನ ವರ್ಷದ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ನಿರ್ಧಾರ ಕೈಗೊಳ್ಳಲಾಗಿದೆ.

ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಈರುಳ್ಳಿ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಇರಲಿದೆ. ಇದರಿಂದ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಬಹುದು ಎಂದೂ ಕೃಷಿ ಸಚಿವ ಪವಾರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.