ADVERTISEMENT

ಉತ್ತರಾಖಂಡದ ಸಿ.ಎಂ ಆಗಿ ಖಂಡೂರಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ಮುಖ್ಯಮಂತ್ರಿಯಾಗಿ 76 ವರ್ಷದ ನಿವೃತ್ತ ಸೇನಾಧಿಕಾರಿ ಭುವನಚಂದ್ರ ಖಂಡೂರಿ ಭಾನುವಾರ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

2009ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರಾಖಂಡದ ಎಲ್ಲ ಐದು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಪರಾಜಯ ಅನುಭವಿಸಿದ ಹಿನ್ನೆಲೆಯಲ್ಲಿ ಖಂಡೂರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಮೇಶ್ ಪೋಖ್ರಿಯಾಲ್ ಅವರ ನಾಯಕತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದ ಪರಿಣಾಮ ಖಂಡೂರಿ ಅವರಿಗೆ ಈಗ ಮತ್ತೊಮ್ಮೆ ರಾಜ್ಯದ ಸಿಎಂ ಸ್ಥಾನ ಒಲಿದು ಬಂದಿದೆ.

ಬೆಳಿಗ್ಗೆ ಪೋಖ್ರಿಯಾಲ್ ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಹೊಸ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಧ್ವನಿಮತದ ಮೂಲಕ ಆಯ್ಕೆ ಮಾಡಲಾಯಿತು. ಅವರ ಸಹೋದ್ಯೋಗಿಗಳಾಗಿದ್ದ ಎಲ್ಲ 11 ಸಚಿವರನ್ನೂ ಖಂಡೂರಿ ತಮ್ಮ  ಸಚಿವ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ.

2012ರ ಫೆಬ್ರುವರಿ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಪಕ್ಷದ ವರ್ಚಸ್ಸು ಕಾಪಾಡಿಕೊಳ್ಳಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ ಎಂದೇ ಈಗ ಅರ್ಥೈಸಲಾಗುತ್ತಿದೆ.

ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೋಖ್ರಿಯಾಲ್  `ನಾನು ಪಕ್ಷದ ಕಾರ್ಯಕರ್ತ. ಪಕ್ಷವು ನನಗೆ ಯಾವ ಜವಾಬ್ದಾರಿ ನೀಡುತ್ತದೆಯೊ ಅದನ್ನು ನಿಭಾಯಿಸಲು ಸಿದ್ಧ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.