ADVERTISEMENT

ಉತ್ತರಾಖಂಡ: ಮತ್ತೆ ಕುಂಭದ್ರೋಣ ಮಳೆ, ರಕ್ಷಣಾ ಕಾರ್ಯಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 10:45 IST
Last Updated 24 ಜೂನ್ 2013, 10:45 IST

ಡೆಹ್ರಾಡೂನ್ (ಐಎಎನ್ ಎಸ್): ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಉತ್ತರಾಖಂಡದ ಹಲವೆಡೆಗಳಲ್ಲಿ ಸೋಮವಾರ ಮತ್ತೆ ಸುರಿದ ಭಾರಿ ಮಳೆ ರಕ್ಷಣಾ ಕಾರ್ಯಾಚರಣೆಗಳಿಗೆ ಪುನಃ ಅಡ್ಡಿಯನ್ನುಂಟು ಮಾಡಿದೆ. ಮಳೆ, ಪ್ರವಾಹಗಳಿಂದಾಗಿ ತೊಂದರೆಯಲ್ಲಿ ಸಿಲುಕಿಕೊಂಡಿರುವ ಯಾತ್ರಾರ್ಥಿಗಳನ್ನು ತೆರವುಗೊಳಿಸಲು ಮಳೆಯ ಮಧ್ಯೆಯೇ ಸೇನೆ, ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ (ಎನ್ ಡಿ ಆರ್ ಎಫ್) ಮತ್ತು ಭಾರತ- ಟಿಬೆಟ್ ಗಡಿ ಪೊಲೀಸ್ ಪಡೆಗಳು ಹರಸಾಹಸ ನಡೆಸುತ್ತಿವೆ.

ರುದ್ರಪ್ರಯಾಗದಲ್ಲಿ ಮತ್ತೆ ಭಾರಿ ಮಳೆ ಸುರಿಯುತ್ತಿದ್ದು ತಿಲ್ ವಾಡ ಮತ್ತು ಗೌರಿಕುಂಡದ ಸಂಪರ್ಕ ಕಡಿದುಹೋಗಿದೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ಇಲ್ಲಿ ತಿಳಿಸಿದರು.

ಗೌರಿಕುಂಡದಲ್ಲಿ 500ಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡಿದ್ದು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನಡೆಸಿದ ಯತ್ನಗಳು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿಫಲಗೊಂಡಿವೆ ಎಂದು ಸೇನಾ ಅಧಿಕಾರಿಯೊಬ್ಬರು ಐಎಎನ್ ಎಸ್ ಗೆ ತಿಳಿಸಿದರು.

ಗುಪ್ತಕಾಶಿ, ಹರ್ಸಿಲ್ ಮತ್ತು ಬದರಿನಾಥ ಮತ್ತಿತರ ಕಡೆಗಳಲ್ಲಿ ಸಹಸ್ರಾರು ಮಂದಿ ಇನ್ನೂ ಸಿಕ್ಕಿಹಾಕಿಕೊಂಡಿದ್ದಾರೆ.

ಮತ್ತೆ ಸುರಿಯುತ್ತಿರುವ ವರ್ಷಧಾರೆಯ ಪರಿಣಾಮವಾಗಿ ಅಲಕಾನಂದ ಮತ್ತು ಮಂದಾಕಿನಿ ನದಿಗಳು ರುದ್ರಪ್ರಯಾಗದಲ್ಲಿ ಉಕ್ಕೇರಿ ಹರಿಯುತ್ತಿವೆ.  ಪಿತೋರ್ ಗಡ, ನೈನಿತಾಲ್, ಚಂಪಾವತ್, ಊಧಮ್ ಸಿಂಗ್ ನಗರ ಮತ್ತು ಹಲ್ಧ್ವಾನಿ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲೂ ಸೋಮವಾರ ಮತ್ತೆ ಕುಂಭದ್ರೋಣ ಮಳೆ ಸುರಿಯುತ್ತಿದೆ ಎಂದು ವರದಿಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.