ADVERTISEMENT

ಉತ್ತರಾಖಂಡ ಸಿಎಂ ಆಯ್ಕೆಗೆ ಕಸರತ್ತು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ನವದೆಹಲಿ(ಪಿಟಿಐ):ಉತ್ತರಾಖಂಡದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ತಾರಕಕ್ಕೇರಿದ್ದು ರಾಜ್ಯದ ಮತ್ತು ಕೇಂದ್ರದ ಪ್ರಮುಖ ನಾಯಕರು ಹೊಸ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ಗಹನವಾದ ಚರ್ಚೆ ನಡೆಸಿದ್ದಾರೆ.

ಕೇಂದ್ರ ಸಚಿವ ಹರಿಶ್ ರಾವತ್ ಮತ್ತು ಕಾಂಗ್ರೆಸ್ ಸಂಸದ ವಿಜಯ್ ಬಹುಗುಣ ಅವರು ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದು, ಇಬ್ಬರೂ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಚೌಧರಿ ಬೀರೇಂದರ್ ಸಿಂಗ್ ಮತ್ತು ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಜತೆ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು.

`ಆಜಾದ್ ಜತೆ ಚರ್ಚಿಸಿದಾಗ ರಾಜ್ಯದಲ್ಲಿ ಸರ್ಕಾರ ರಚನೆಯ ಬಗ್ಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ~ ಎಂದು ರಾವತ್ ತಿಳಿಸಿದ್ದಾರೆ. `ನಾವು ಸರ್ಕಾರ ರಚಿಸಿದರಷ್ಟೆ ಸಾಲದು, ಅದನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕು~ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವೀಕ್ಷಕರಾದ ಆಜಾದ್ ಮತ್ತು ಬೀರೇಂದರ್ ಸಿಂಗ್ ಅವರು ಡೆಹ್ರಾಡೂನ್‌ನಲ್ಲಿ ಪಕ್ಷದ 32 ಶಾಸಕರು ಮತ್ತು ಇಬ್ಬರು ಪಕ್ಷೇತರ ಶಾಸಕರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದಾರೆ.

`ನಮ್ಮ ಅಭಿಪ್ರಾಯವನ್ನು ಪಡೆದಿದ್ದಾರೆ. ಸರ್ಕಾರ ರಚಿಸಿದ ನಂತರ ಅದನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವುದರ ಬಗ್ಗೆ ಚರ್ಚೆ ನಡೆಸಲಾಯಿತು~ ಎಂದು ಬಹುಗುಣ ತಿಳಿಸಿದ್ದಾರೆ.

ಇನ್ನು ಒಂದೆರಡು ದಿನಗಳಲ್ಲಿ ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ರಾವತ್ ಮತ್ತು ಬಹುಗುಣ ಅವರ ಬದಲಿಗೆ ಶಾಸಕರಲ್ಲಿಯೇ ಒಬ್ಬರಿಗೆ ಮುಖ್ಯಮಂತ್ರಿ ಹುದ್ದೆ ನೀಡುವ ಉದ್ದೇಶ ಹೈಕಮಾಂಡ್‌ಗೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.  ಬಹುತೇಕ ಕಾಂಗ್ರೆಸ್ ಶಾಸಕರು ದೆಹಲಿಯಲ್ಲೇ ಇದ್ದು ತಮ್ಮ ನೆಚ್ಚಿನ ನಾಯಕನ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಲು ಕಾದಿದ್ದಾರೆ.

ಈ ಮಧ್ಯೆ ಉತ್ತರಾಖಂಡ ಪಿಸಿಸಿ ಅಧ್ಯಕ್ಷ ಯಶಪಾಲ್ ಆರ್ಯ ಅವರು ಆಜಾದ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಹಾಗೂ ಅನೇಕ ಶಾಸಕರು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಶಾಸಕರ ಪೈಕಿ ಹರಕ್ ಸಿಂಗ್ ರಾವತ್, ಪಿಸಿಸಿ ಮುಖ್ಯಸ್ಥ ಯಶಪಾಲ್ ಆರ್ಯ, ಪ್ರೀತಮ್ ಸಿಂಗ್ ಮತ್ತು ಇಂದಿರಾ ಹರದೇಶ್ ಅವರು ಮುಖ್ಯಮಂತ್ರಿಯಾಗಲು ಶತಪ್ರಯತ್ನ ಮಾಡುತ್ತಿದ್ದಾರೆ.

32 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 3ಪಕ್ಷೇತರರು ಮತ್ತು ಉತ್ತರಾಖಂಡ ಕ್ರಾಂತಿ ದಳದ ಒಬ್ಬ ಶಾಸಕರ ಬೆಂಬಲವನ್ನು ಪಡೆದು ಸರ್ಕಾರ ರಚಿಸಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.