ADVERTISEMENT

ಉತ್ತರ ಚಳಿಗೆ ತತ್ತರ: 7 ಸಾವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಹೆಚ್ಚುತ್ತಿರುವ ಚಳಿಗಾಳಿಗೆ ಉತ್ತರ ಭಾರತ ತತ್ತರಿಸಿದ್ದು, ಈವರೆಗೆ ಏಳು ಜನರು ಬಲಿಯಾಗಿದ್ದಾರೆ.

ರಾಜಧಾನಿ ಸೇರಿದಂತೆ ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ದಟ್ಟವಾದ ಮಂಜಿನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ದೆಹಲಿಯಲ್ಲಿ ಗರಿಷ್ಠ ತಾಪಮಾನ 16.2 ಡಿಗ್ರಿ ಸೆಲ್ಸಿಯಸ್‌ಗೆ ಮತ್ತು ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಗರಿಷ್ಠ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಏಳು ಡಿಗ್ರಿ ಸೆಲ್ಸಿಯಸ್‌ನಷ್ಟು ಮತ್ತು ಕನಿಷ್ಠ ತಾಪಮಾನ ಒಂದು ಡಿಗ್ರಿ ಕುಸಿತ ಕಂಡಿದೆ. 

 ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದ ವಿವಿಧೆಡೆ ಚಳಿಗಾಳಿಯಿಂದಾಗಿ ಏಳು ಜನರು ಸಾವನ್ನಪ್ಪಿದ್ದಾರೆ. ರಾತ್ರಿಯ ಚಳಿಗೆ ಜನತೆ ಬೆಚ್ಚಿ ಬಿದ್ದಿದ್ದು, ಬೆಳಿಗ್ಗೆ ದಟ್ಟವಾದ ಮಂಜು ಕವಿದ ವಾತಾವರಣದಲ್ಲಿ ಸೂರ್ಯನ ಕಿರಣಗಳು ಅಪರೂಪವಾಗಿವೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

 ಪಂಜಾಬ್, ಹರಿಯಾಣ, ಚಂಡೀಗಡದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರೈಲು, ವಿಮಾನ ಮತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ದಟ್ಟ ಮಂಜು ಕವಿದ ಕಾರಣ ರಸ್ತೆಗಳು ಗೋಚರಿಸದೆ ಕೆಲವು ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.