ADVERTISEMENT

ಉತ್ತರ ಪ್ರದೇಶ: ಐಸಿಯುನಲ್ಲಿ ಐವರ ಸಾವು

ಆಸ್ಪತ್ರೆಯಲ್ಲಿ ಎ.ಸಿ ವೈಫಲ್ಯ ಆರೋಪ

ಪಿಟಿಐ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಕೆಟ್ಟುಹೋಗಿದ್ದ ಎ.ಸಿ ಯಂತ್ರವನ್ನು ಆಸ್ಪತ್ರೆಯಿಂದ ಹೊರಗಡೆ ಸಾಗಿಸಲಾಯಿತು
ಕೆಟ್ಟುಹೋಗಿದ್ದ ಎ.ಸಿ ಯಂತ್ರವನ್ನು ಆಸ್ಪತ್ರೆಯಿಂದ ಹೊರಗಡೆ ಸಾಗಿಸಲಾಯಿತು   

ಕಾನ್ಪುರ, ಉತ್ತರ ಪ್ರದೇಶ : ಇಲ್ಲಿನ ಲಾಲಾ ಲಜಪತ್‌ ರಾಯ್ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಐವರು ರೋಗಿಗಳು ಕಳೆದ ಎರಡು ದಿನದಲ್ಲಿ ಮೃತಪಟ್ಟಿದ್ದಾರೆ.

ಹವಾನಿಯಂತ್ರಿತ ವ್ಯವಸ್ಥೆಯ (ಎ.ಸಿ) ವೈಫಲ್ಯವೇ ಸಾವಿಗೆ ಕಾರಣ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ. ಕೆಲವು ದಿನಗಳಿಂದ ಐಸಿಯುನ ಎ.ಸಿ. ಹಾಳಾಗಿದ್ದು, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ. ಇದನ್ನು ಆಸ್ಪತ್ರೆ ನಿರಾಕರಿಸಿದೆ. ಕಾಯಿಲೆಯಿಂದ ರೋಗಿಗಳು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯನ್ನು ನಿರ್ವಹಿಸುವ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ನವನೀತ್ ಕುಮಾರ್ ಹೇಳಿದ್ದಾರೆ.

‘ಎ.ಸಿಯಲ್ಲಿ ಗುರುವಾರ ಸಮಸ್ಯೆ ಉಂಟಾಗಿತ್ತು. ಆದರೆ ತಕ್ಷಣ ಅದನ್ನು ಸರಿಪಡಿಸಲಾಗಿದೆ. ಅದರಿಂದಲೇ ರೋಗಿಗಳು ಮೃತಪಟ್ಟಿದ್ದಾರೆ ಎನ್ನುವುದು ಸರಿಯಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಇಂದ್ರಪಾಲ್ (75), ಗಂಗಾ ಪ್ರಸಾದ್ (75), ರಸೂಲ್ ಬಕ್ಷ್ (62), ಮುರಳಿ ಲಾಲ್ (65) ಹಾಗೂ ಮತ್ತೊಬ್ಬ ರೋಗಿ ಮೃತಪಟ್ಟಿದ್ದಾರೆ.

ಎ.ಸಿ ಸಮಸ್ಯೆ ಸ್ವಲ್ಪ ಇತ್ತು ಎಂದು ಐಸಿಯು ಉಸ್ತುವಾರಿ ವಹಿಸಿರುವ ಸೌರವ್ ಅಗರ್‌ವಾಲ್ ಹೇಳಿದ್ದಾರೆ. ಮೆಡಿಸಿನ್ ವಿಭಾಗದ ಎ.ಸಿ ಘಟಕವು ಎರಡು ದಿನಗಳ ಹಿಂದೆ ಸ್ಥಗಿತಗೊಂಡಿತ್ತು ಎಂದಿದ್ದಾರೆ.

‘ಆಸ್ಪತ್ರೆಯ ಮೇಲ್ವಿಚಾರಕ ಅಧಿಕಾರಿ, ಮುಖ್ಯ ವೈದ್ಯಕೀಯ ಅಧಿಕಾರಿ, ವಿದ್ಯುತ್ ವಿಭಾಗದ ಅಧಿಕಾರಿಗಳು, ಸಂಬಂಧಪಟ್ಟ ಏಜೆನ್ಸಿಯ ಗಮನಕ್ಕೆ ಇದನ್ನು ತರಲಾಗಿತ್ತು. ಸಮಸ್ಯೆಯನ್ನು ಪತ್ತೆಹಚ್ಚಲಾಗಿತ್ತು. ಕಂಪ್ರೆಸರ್ ಗುರುವಾರ ಮತ್ತೆ ಸ್ಫೋಟಗೊಂಡಿತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.