ADVERTISEMENT

ಉ.ಪ್ರ: ಪ್ರಚಾರ ಆರಂಭಿಸಿದ ಸೋನಿಯಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಗೋಂಡಾ (ಉತ್ತರ ಪ್ರದೇಶ) (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

ಗೋಂಡಾದಲ್ಲಿ ನಡೆದ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಚುನಾವಣಾ ಸಂದರ್ಭದಲ್ಲಿ ಸಂಪುಟದಿಂದ ಸಚಿವರನ್ನು ವಜಾಗೊಳಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದರು.

`ಈಗಿನ ಮುಖ್ಯಮಂತ್ರಿಗಳು ಚುನಾವಣೆಯ ಸಂದರ್ಭದಲ್ಲಿ ಒಟ್ಟು 21 ಸಚಿವರನ್ನು ಸಂಪುಟದಿಂದ ವಜಾ ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ  ಈ ಸಚಿವರು ನಡೆಸಿರುವ ಭ್ರಷ್ಟಾಚಾರಗಳನ್ನು ನೋಡಲು ಮಾಯಾವತಿ ಅವರಿಗೆ ಸಾಧ್ಯವಾಗಿರಲಿಲ್ಲ. ಈಗ ಸಚಿವರ ರಾಜೀನಾಮೆ ಪಡೆಯುವುದರಿಂದ ಅವರ ಸರ್ಕಾರ ಸ್ವಚ್ಛವಾಗಿದೆಯೇ ಎಂದು ಕೇಳಲು ನಾನು ಬಯಸುತ್ತೇನೆ~ ಎಂದು ಸೋನಿಯಾ ಗಾಂಧಿ ವ್ಯಂಗ್ಯವಾಡಿದರು.

`ಇದು ಜನರಿಗೆ ಮಾಡುತ್ತಿರುವ ಮೋಸವಲ್ಲವೇ. ಜನರನ್ನು ವಂಚಿಸುವ ಯತ್ನವಲ್ಲವೇ~ ಎಂದು ಪ್ರಶ್ನಿಸಿದರು. ಕಳೆದ 22 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಹೊರತಾದ ಸರ್ಕಾರಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸೋನಿಯಾ, ಎಲ್ಲಾ ಸರ್ಕಾರಗಳು ಉತ್ತರ ಪ್ರದೇಶವನ್ನು ಅಧಃಪತನದತ್ತ ಕೊಂಡೊಯ್ದಿವೆ. ಆಡಳಿತ ನೀಡಿದ ಎಲ್ಲಾ ಪಕ್ಷಗಳ ಜನರು ಕೆಟ್ಟಕೆಲಸದಲ್ಲೇ ತೊಡಗಿಕೊಂಡಿದ್ದರಿಂದ ಜನರ ಕೂಗನ್ನು ಕೇಳುವವರೇ ಇಲ್ಲದಂತಾಗ್ದ್ದಿದರು ಎಂದರು.

`ಆಡಳಿತ ನಡೆಸಿರುವ ಪಕ್ಷಗಳು ತಮ್ಮ ಸರ್ಕಾರದ ಅವಧಿಯಲ್ಲಿ ಉತ್ತರ ಪ್ರದೇಶಕ್ಕಾಗಿ ಏನೂ ಮಾಡಿಲ್ಲ. ತಮ್ಮ ಜೇಬುಗಳನ್ನು ಮಾತ್ರ ತುಂಬಿಸಿಕೊಂಡಿವೆ~ ಎಂದು ಸೋನಿಯಾ ಗಾಂಧಿ ಆರೋಪಿಸಿದರು.

ಬೀಡುಬಿಟ್ಟ ಇಡೀ ಕುಟುಂಬ
ಪ್ರಜಾವಾಣಿ ವಾರ್ತೆ
ನವದೆಹಲಿ: ಕಾಂಗ್ರೆಸ್ ಪಕ್ಷದ ಪ್ರಮುಖ ಪ್ರಚಾರಕರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಮುಂದಿನ ಒಂದು ತಿಂಗಳು ಮೊಕ್ಕಾಂ ಹೂಡಲಿದ್ದಾರೆ.

ಸೋನಿಯಾ ಗಾಂಧಿ ಅವರು ಬುಧವಾರ ಉತ್ತರ ಪ್ರದೇಶದ ದಿಯೊರಿಯಾ ಮತ್ತು ಗೋಂಡಾದಲ್ಲಿ ಚುನಾವಣಾ ರ‌್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಚುನಾವಣಾ ಪ್ರಚಾರವನ್ನು ಆರಂಭಿಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕಳೆದ ಕೆಲವು ತಿಂಗಳಿನಿಂದಲೇ ಉತ್ತರ ಪ್ರದೇಶದಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಫೆಬ್ರುವರಿ 3ರಿಂದ ರಾಯ್ ಬರೇಲಿ ಮತ್ತು ಅಮೇಥಿಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT