ADVERTISEMENT

ಎಕರೆ ಜಾಗದಲ್ಲೂ ಸಿಬಿಎಸ್‌ಇ ಶಾಲೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ನವದೆಹಲಿ: ನಗರ ಪ್ರದೇಶಗಳಲ್ಲಿ ಹೊಸದಾಗಿ ಶಾಲೆ ಆರಂಭಿಸಬೇಕಾದರೆ ಅಗತ್ಯವಾಗಿರುವ ಕನಿಷ್ಠ ನಿವೇಶನದ ನಿಯಮಾವಳಿಗಳನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸಡಿಲಗೊಳಿಸಿದೆ.

ನಗರ ಪ್ರದೇಶಗಳಲ್ಲಿ ಸಣ್ಣಪುಟ್ಟ ಕಟ್ಟಡಗಳಲ್ಲಿ ಶಾಲೆ ತೆಗೆಯುವುದರಿಂದ ಮಕ್ಕಳಿಗೆ ಸೂಕ್ತ ದೈಹಿಕ  ಶಿಕ್ಷಣ ಸಿಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಮಂಡಳಿಯು ಹೊಸ ಶಾಲೆ ಆರಂಭಿಸುವವರು ಹಕನಿಷ್ಠ ಭೂಮಿ ಹೊಂದಿರಬೇಕು ಎಂಬ ನಿಯಮ ರೂಪಿಸಿತ್ತು.

15 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಶಾಲೆ ಆರಂಭಿಸುವವರು 2 ಎಕರೆ ಸ್ಥಳ ಹೊಂದಿರಬೇಕೆಂಬ ನಿಯಮ ಮಾಡಲಾಗಿತ್ತು. ಆದರೆ, ಈಗ ಮಂಡಳಿಯು ತನ್ನ ಉಪ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, 1 ಎಕರೆ ಜಾಗ ಹೊಂದಿರುದ್ದರೂ ಶಾಲೆ ಆರಂಭಿಸಬಹುದು ಎಂದು ಸಿಬಿಎಸ್‌ಇ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ದೊಡ್ಡ ನಗರಗಳಲ್ಲಿ ವಿಶಾಲವಾದ ಜಾಗ ದೊರೆಯುವುದು ಕಷ್ಟ. ಹಾಗಾಗಿ 2 ಎಕರೆ ಸ್ಥಳ ಹೊಂದಿರಬೇಕೆಂಬ ನಿಯಮದಲ್ಲಿ ಬದಲಾವಣೆ ತರಬೇಕೆಂಬ ಒತ್ತಡ ಬಂದ ಹಿನ್ನೆಲೆಯಲ್ಲಿ ಇತ್ತೀಚಿಗೆ ನಡೆದ ಸಿಬಿಎಸ್‌ಇ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಶಾಲೆ ಆರಂಭಿಸಲು ಮಾನ್ಯತೆಗಾಗಿ ಅರ್ಜಿ ಸಲ್ಲಿಸಲು ತಡ ಮಾಡಿದವರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ನಿಗದಿಪಡಿಸುವ ವಿಷಯಕ್ಕೂ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಶಾಲಾ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಿದವರ ಅರ್ಜಿಯು ಒಂದು ವೇಳೆ ತಿರಸ್ಕೃತವಾದರೆ ಅವರ ಹಣ ಮರುಪಾವತಿಸಲು ನಿರ್ಧರಿಸಲಾಗಿದೆ.

ಮಾನ್ಯತೆ ಹೊಂದಿದ ಎಲ್ಲಾ ಶಾಲೆಗಳ ಕಾಯಂ ಮತ್ತು ಅರೆಕಾಲಿಕ ಸಿಬ್ಬಂದಿಯು ಪಿಎಫ್ ಯೋಜನೆಯ ಸದಸ್ಯತ್ವ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.  ಅಭ್ಯರ್ಥಿ ಅಥವಾ ಪೋಷಕರ ಹೆಸರು ಬದಲಾವಣೆಗೆ ಒಂದು ವರ್ಷ ಕಾಲಾವಕಾಶ ನೀಡಲಾಗಿದೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ನೀತಿಯಡಿ ಪ್ರಸಕ್ತ ಶಾಲಾ ಶಿಕ್ಷಣ ವ್ಯವಸ್ಥೆ ಕಾರ್ಯಕ್ರಮದಡಿ ಉಪ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.