ADVERTISEMENT

ಎನ್‌ಡಿಎ, ಯುಪಿಎ ಸರ್ಕಾರಗಳ ಅವಧಿಯಲ್ಲಿ ದೋಷ: ಸಮಿತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 15:30 IST
Last Updated 4 ಫೆಬ್ರುವರಿ 2011, 15:30 IST

ನವದೆಹಲಿ (ಪಿಟಿಐ):  ಸ್ಪೆಕ್ಟ್ರಂ ಹಂಚಿಕೆ ನೀತಿಗೆ ಸಂಬಂಧಿಸಿದಂತೆ ಎನ್‌ಡಿಎ ಮತ್ತು ಯುಪಿಎ ಎರಡೂ ಸರ್ಕಾರಗಳು 2003ರಿಂದ 08ರವರೆಗೆ ಅನುಸರಿಸಿದ ಎಲ್ಲ ನಿರ್ಧಾರಗಳೂ ತಪ್ಪು ಎಂದು 2ಜಿ ಸ್ಪೆಕ್ಟ್ರಂ ಹಂಚಿಕೆ ಕಾರ್ಯವಿಧಾನದಲ್ಲಿನ ಲೋಪಗಳ ತನಿಖೆಗಾಗಿ ನೇಮಕಗೊಂಡಿದ್ದ ಏಕಸದಸ್ಯ ಸಮಿತಿ ಅಭಿಪ್ರಾಯಪಟ್ಟಿದೆ.

ಶಿವರಾಜ್ ವಿ. ಪಾಟೀಲ್ ಸಮಿತಿಯ ವರದಿಯನ್ನು ಶುಕ್ರವಾರ ಬಹಿರಂಗಗೊಳಿಸಿದ ದೂರಸಂಪರ್ಕ ಸಚಿವ ಕಪಿಲ್ ಸಿಬಲ್, ಈ ವರದಿಯನ್ನು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಅವರು ಬಂಧನಕ್ಕೊಳಗಾದ ಒಂದು ದಿನದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ‘ಹಿಂದಿನ ಎನ್‌ಡಿಎ ಸರ್ಕಾರ ಪಾಲಿಸಿದ ನೀತಿಗಳನ್ನೇ ನಾನೂ ಅನುಸರಿಸಿದ್ದೇನೆ ಎಂದು ಮಾಜಿ ಸಚಿವರು ಹೇಳಿದ್ದಾರೆ. ಆದರೆ ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ ಹಿಂದಿನ ನೀತಿಗಳೇ ತಪ್ಪಾಗಿರುವುದು’ ಎಂದರು.

‘ಸ್ಪೆಕ್ಟ್ರಂ ಹಂಚಿಕೆಯ ಮೂಲದಲ್ಲೇ ದೋಷ ಇದೆ. 2004ರವರೆಗಿನ ಎನ್‌ಡಿಎ ಸರ್ಕಾರ ಮತ್ತು ನಂತರದ ಯುಪಿಎ ಸರ್ಕಾರ 2008ರವರೆಗೆ ಅನುಸರಿಸಿದ ಎರಡೂ ಕಾರ್ಯವಿಧಾನ ಸರಿ ಇಲ್ಲ’ ಎಂಬ ವರದಿಯಲ್ಲಿನ ಅಂಶವನ್ನು ಸಿಬಲ್ ಉಲ್ಲೇಖಿಸಿದರು.

ಸ್ಪೆಕ್ಟ್ರಂ ಬೆಲೆ ನಿಗದಿಯಲ್ಲಿ ದೂರಸಂಪರ್ಕ ಇಲಾಖೆಯು ಕಾನೂನು ಸಚಿವಾಲಯದ ಸಲಹೆ ಮತ್ತು ಹಣಕಾಸು ಇಲಾಖೆಯ ಅಭಿಪ್ರಾಯಕ್ಕೆ ಕಿವಿಗೊಡಲಿಲ್ಲ ಎಂಬುದನ್ನೂ ವರದಿ ಪ್ರಸ್ತಾಪಿಸಿದೆ. ಜೊತೆಗೆ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಸುಧಾರಣೆ ಹಾಗೂ ಈ ವಿರಳ ನೈಸರ್ಗಿಕ ಸಂಪನ್ಮೂಲ ಸಂಗ್ರಹಗಾರರಿಗೆ ದಂಡ ವಿಧಿಸುವ ಶಿಫಾರಸುಗಳನ್ನೂ ಅದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.