ADVERTISEMENT

ಎಸ್ಸಾರ್, ಲೂಪ್ ಸುಪ್ರೀಂ ಮೊರೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

 ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಸಲ್ಲಿಸಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಶ್ನಿಸಿ ಎಸ್ಸಾರ್ ಮತ್ತು ಲೂಪ್ ಕಂಪೆನಿಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿವೆ.

2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ವಿರುದ್ಧ ಭ್ರಷ್ಟಾಚಾರ  ನಿಗ್ರಹ ಕಾಯಿದೆ (ಪಿಸಿಎ) ಅನ್ವಯ ಪ್ರಕರಣ ದಾಖಲಾಗಿದೆ.

ಆದರೆ ತಮ್ಮ ಕಂಪೆನಿ ವಿರುದ್ಧ ಅಥವಾ ಕಂಪೆನಿಯ ಅಧಿಕಾರಿಗಳ ವಿರುದ್ಧ ಅಂತಹ ಆರೋಪಗಳು ಇಲ್ಲ. ಹಾಗಾಗಿ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಸುವ ಬದಲಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿಯೇ ನಡೆಸಬೇಕು ಎಂದು ಜಿ.ಎಸ್. ಸಿಂಘ್ವಿ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಎಸ್ಸಾರ್ ಕಂಪೆನಿ ಪರ ವಕೀಲ ಹರೀಶ್ ಸಾಳ್ವೆ ವಾದಿಸಿದರು.

2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಈ ಕಂಪೆನಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿಯಲ್ಲಿ ಆರೋಪ ಮಾಡದೇ ಇರುವುದರಿಂದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತನಿಖೆ ನಡೆಸಬಹುದೇ ಎನ್ನುವ ಕುರಿತು ಸ್ಪಷ್ಟಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಈ ಎರಡೂ ಕಂಪನೆಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕಂಪೆನಿಗಳು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿವೆ.

 ಜಾಮೀನು ತಿರಸ್ಕಾರ

ಹೈದರಾಬಾದ್: ಎಮ್ಮಾರ್ ಪ್ರಾಪರ್ಟಿಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆಂಧ್ರ ಪ್ರದೇಶ ಮಾಜಿ ಗೃಹ ಕಾರ್ಯದರ್ಶಿ ಬಿ.ಪಿ.ಆಚಾರ್ಯ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಸಿಬಿಐ ಪರ ವಕೀಲರು ವಾದಿಸಿದರು.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.