ADVERTISEMENT

ಒಂದೆಡೆ ಸಂತಸ; ಇನ್ನೊಂದೆಡೆ ನೀರವ ಮೌನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ನವದೆಹಲಿ (ಐಎಎನ್‌ಎಸ್):  ಐದು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶದ ಪ್ರತ್ಯಕ್ಷ ಪ್ರಭಾವ ಮಂಗಳವಾರ ಇಲ್ಲಿನ ಬಿಜೆಪಿ, ಮತ್ತು ಕಾಂಗ್ರೆಸ್‌ನ ಕೇಂದ್ರ ಕಚೇರಿಗಳಲ್ಲಿ ಪ್ರತಿಫಲನಗೊಂಡಿತು.

ಚುನಾವಣಾ ಫಲಿತಾಂಶದಿಂದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂತಸದ ವಾತಾವರಣ ತುಂಬಿ ತುಳುಕಿದ್ದರೆ, ಕಾಂಗ್ರೆಸ್ ಕಚೇರಿಯಲ್ಲಿ ನೀರವ ಮೌನ ನೆಲೆಸಿತ್ತು. ಗೋವಾ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿನ ಹೀನಾಯ ಸೋಲಿನಿಂದ ಕಂಗೆಟ್ಟ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿನ ಅಕ್ಬರ್ ರಸ್ತೆಯಲ್ಲಿನ ಕಚೇರಿಗೆ ಭೇಟಿ ನೀಡದೆ ದೂರ ನಿಂತಿದ್ದುದು ಕಂಡುಬಂತು. ಎಲ್ಲಕ್ಕಿಂತ ಮುಖ್ಯವಾಗಿ ಮಾಧ್ಯಮದವರ ಕಣ್ಣು ತಪ್ಪಿಸುವುದೇ ಅವರ ಗುರಿಯಾಗಿತ್ತು ಎನ್ನಲಾಗಿದೆ. 

ಇವೆಲ್ಲವುಗಳ ನಡುವೆ ಕಾಂಗ್ರೆಸ್ ಮುಖಂಡರಾದ ಜನಾರ್ದನ ದ್ವಿವೇದಿ ಮಾತ್ರ ಕಚೇರಿಯಿಂದ ಹೊರಬಂದು, ಕಾಂಗ್ರೆಸ್ ಅಧ್ಯಕ್ಷರ ವಸತಿಯಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಕರೆದಿದ್ದಾರೆ ಎಂದಷ್ಟೇ ಹೇಳುವ ಧೈರ್ಯ ತೋರಿದರು ಎನ್ನಲಾಗಿದೆ. ಇಷ್ಟು ಹೇಳಿದ್ದೇ, ಮಾಧ್ಯಮ ವರದಿಗಾರರು 10, ಜನಪಥದಲ್ಲಿರುವ ಕಾಂಗ್ರೆಸ್ ಅಧ್ಯಕ್ಷರ ವಸತಿಯತ್ತ ದೌಡಾಯಿಸಿದರು.

ಇದಕ್ಕೆ ವೈರುಧ್ಯವೆಂಬಂತೆ ಇಲ್ಲಿನ 11, ಅಶೋಕಾ ರಸ್ತೆಯಲ್ಲಿನ ಬಿಜೆಪಿ ಕಚೇರಿಯಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಪಟಾಕಿಗಳನ್ನು ಸಿಡಿಸುವ ಮೂಲಕ ಪಕ್ಷದ ಕಾರ್ಯಕರ್ತರು ಪಕ್ಷದ ವಿಜಯವನ್ನು ಕೊಂಡಾಡಿದರು.

`ನಮ್ಮ ಜಯಕ್ಕಿಂತಲೂ ಮುಖ್ಯವಾಗಿ ಜನ ಕಾಂಗ್ರೆಸ್ ವಿರೋಧಿಗಳಾಗಿದ್ದಾರೆ ಎನ್ನುವುದೇ ಸಂತಸದ ವಿಷಯ. ಉತ್ತರ ಪ್ರದೇಶದಲ್ಲಿ ನಾವು ಜಯ ಗಳಿಸದಿದ್ದರೂ ಅಲ್ಲಿ ಕಾಂಗ್ರೆಸ್ ನೆಲಕಚ್ಚಿರುವುದೇ ಖುಷಿಯ ವಿಷಯ~ ಎಂದು ಪಕ್ಷದ ಕಾರ್ಯಕರ್ತರೊಬ್ಬರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.