ಭುವನೇಶ್ವರ (ಐಎಎನ್‌ಎಸ್): ಆಡಳಿತಾರೂಢ ಬಿಜೆಡಿಯ ಬುಡಕಟ್ಟು ಪ್ರದೇಶದ ಶಾಸಕ ಜ್ಹೀನಾ ಹಿಕಾಕ ಅವರನ್ನು ಕಳೆದ ಹತ್ತು ದಿನಗಳಿಂದ ಅಪಹರಿಸಿ ಒತ್ತೆಯಿಟ್ಟುಕೊಂಡಿರುವ ಮಾವೊವಾದಿಗಳು ಗುರುವಾರದೊಳಗೆ (ಏಪ್ರಿಲ್ 5) ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮಂಗಳವಾರ ಗಡುವು ನೀಡಿದ್ದಾರೆ.
ಮಾವೊವಾದಿಗಳ ಮುಖಂಡ, ಭಾರತ -ಮಾವೊವಾದಿ ಕಮ್ಯೂನಿಸ್ಟ್ ಪಕ್ಷದ ಆಂಧ್ರ - ಒಡಿಶಾ ಗಡಿಯ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿ `ಚಂದ್ರಮೌಳಿ~ ಎಂದು ಹೇಳಿಕೊಂಡಿರುವ ವ್ಯಕ್ತಿ ಬೇಡಿಕೆ ಕುರಿತಂತೆ ರಾಜಧಾನಿ ಭುವನೇಶ್ವರದ ಹಲವು ಪತ್ರಕರ್ತರಿಗೆ ಧ್ವನಿ ಸಂದೇಶ ರವಾನಿಸಿದ್ದಾನೆ.
ಸುಳ್ಳು ಆರೋಪದ ಮೇಲೆ ಕೊರಾಪಟ್ ಮತ್ತು ಮಲ್ಕನ್‌ಗಿರಿ ಜಿಲ್ಲೆಗಳಲ್ಲಿ ಬಂಧಿಸಿರುವ ಚಾಸಿ ಮುಲಿಯಾ ಆದಿವಾಸಿ ಸಂಘದ (ಸಿಎಂಎಎಸ್) ಕಾರ್ಯಕರ್ತರನ್ನು ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಬೇಡಿಕೆಯ ಸಂದೇಶದಲ್ಲಿ ಸೂಚಿಸಲಾಗಿದೆ.
ಬೇಡಿಕೆ ಕುರಿತಂತೆ ಮಾತುಕತೆಗೆ ತಿರಸ್ಕರಿಸಿದರೆ `ನಾವು ಏಪ್ರಿಲ್ 5ದವರೆಗೆ ಗಡುವು ನೀಡುತ್ತೇವೆ~ ಎಂದು ಹೇಳಿರುವ ಮಾವೊ ನಾಯಕ ತನ್ನ ಗುಂಪಿನ ಯಾವುದೇ ಸದಸ್ಯನನ್ನು ಬಿಡುಗಡೆಗೊಳಿಸುವಂತೆ ಹೆಸರಿಸಿಲ್ಲ.
ಸಿಎಂಎಎಸ್ ಸಂಘಟನೆಯು ಮಾವೊವಾದಿಗಳ ಬೆಂಬಲದಿಂದ ರಾಜ್ಯದ ಕೊರಾಪಟ್ ಮತ್ತು ಮಲ್ಕನ್‌ಗಿರಿ ಜಿಲ್ಲೆಗಳು ಸೇರಿದಂತೆ ದಕ್ಷಿಣದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮೀಪುರ ವಿಧಾನಸಭೆ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಿಕಾಕ ಅವರನ್ನು ಕೊರಾಪಟ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಿಂದ ಮಾರ್ಚ್ 24ರಂದು ಅಪಹರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.