ಹೈದರಾಬಾದ್ (ಪಿಟಿಐ): ಕೃಷ್ಣಾ ಹೆಚ್ಚುವರಿ ನೀರು ಹಂಚಿಕೆ ಕುರಿತು ಗುರುವಾರ ಪ್ರಕಟಿಸಲಾದ ತೀರ್ಪಿನಲ್ಲಿ ರಾಜ್ಯಕ್ಕೆ ಅನುಕೂಲವಾಗುವಂತಹ ಕೆಲವು ಅಂಶಗಳೂ ಇವೆ ಎಂದಿರುವ ಕಂದಾಯ ಸಚಿವ ಎನ್.ರಘುವರ ರೆಡ್ಡಿ, ತೀರ್ಪನ್ನು ಪೂರ್ಣ ಅಧ್ಯಯನ ಮಾಡಿದ ನಂತರ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಈ ತೀರ್ಪಿನಲ್ಲಿ ರಾಜ್ಯಕ್ಕೆ ಧನಾತ್ಮಕವಾಗುವಂತಹ ಕೆಲವು ಅಂಶಗಳಿದ್ದರೆ ಇನ್ನು ಕೆಲವು ಋಣಾತ್ಮಕ ಅಂಶಗಳಿವೆ. ಸರ್ಕಾರ ತೀರ್ಪನ್ನು ಕೂಲಕಂಷವಾಗಿ ಅಧ್ಯಯನ ಮಾಡುತ್ತಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಪಕ್ಷ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯದ ರೈತರ ಮೇಲೆ ಇದು ತೀವ್ರ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಗುರುವಾರ ರಾತ್ರಿ ಗುಂಟೂರಿನಲ್ಲಿ ಪಕ್ಷ ಏರ್ಪಡಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಕೃಷ್ಣಾ ಹೆಚ್ಚುವರಿ ನೀರಿನ ಮೇಲಿನ ಹಕ್ಕನ್ನು ರಾಜ್ಯ ಕಳೆದುಕೊಂಡಿದೆ ಎಂದಿದ್ದಾರೆ.
ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ನ್ಯಾಯ ಮಂಡಳಿ ಅನುಮತಿ ನೀಡಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಣತ ವಕೀಲರನ್ನು ನೇಮಿಸಿಕೊಳ್ಳದ ಸರ್ಕಾರ ತನ್ನ ವಾದವನ್ನು ಸರಿಯಾಗಿ ಸಮರ್ಥಿಸಿಕೊಳ್ಳದೇ ಇದ್ದುದೇ ಈ ನಕಾರಾತ್ಮಕ ತೀರ್ಪು ಹೊರಬೀಳಲು ಕಾರಣ ಎಂದೂ ಅವರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.