ADVERTISEMENT

ಕಪ್ಪು ಹಣದ ವಿರುದ್ಧ ಆಂದೋಲನ: ರಾಮ್‌ದೇವ್‌ಗೆ ಪಕ್ಷಾತೀತ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST
ಕಪ್ಪು ಹಣದ ವಿರುದ್ಧ ಆಂದೋಲನ: ರಾಮ್‌ದೇವ್‌ಗೆ ಪಕ್ಷಾತೀತ ಬೆಂಬಲ
ಕಪ್ಪು ಹಣದ ವಿರುದ್ಧ ಆಂದೋಲನ: ರಾಮ್‌ದೇವ್‌ಗೆ ಪಕ್ಷಾತೀತ ಬೆಂಬಲ   

ನವದೆಹಲಿ (ಪಿಟಿಐ): ಕಪ್ಪು ಹಣದ ವಿರುದ್ಧ ಆಂದೋಲನ ಆರಂಭಿಸಿರುವ ರಾಮ್‌ದೇವ್ ಅವರಿಗೆ ಬಿಜೆಪಿ, ಬಿಎಸ್‌ಪಿ, ಎಸ್‌ಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.

ರಾಮ್‌ಲೀಲಾ ಮೈದಾನಕ್ಕೆ ಆಗಮಿಸಿ ಧರಣಿ ಸ್ಥಳದಲ್ಲಿ ರಾಮ್‌ದೇವ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಾತನಾಡಿ, ರಾಮ್‌ದೇವ್ ಹೋರಾಟವನ್ನು ತಮ್ಮ ಪಕ್ಷ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದರು.

ಕಪ್ಪು ಹಣದ ಕುರಿತಾಗಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದ ಗಡ್ಕರಿ, `ಈ ಹೋರಾಟದಲ್ಲಿ ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ. ಈ ಚಳವಳಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಇದು ದೇಶದ ಕೋಟ್ಯಂತರ ಜನರ ಹೋರಾಟವೇ ಹೊರತೂ ಯಾವುದೇ ರಾಜಕೀಯ ಪಕ್ಷದ್ದಲ್ಲ ಎಂದು ಸ್ಪಷ್ಟಪಡಿಸಿದರು.

`ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸು ತರಬೇಕು ಮತ್ತು ಅದನ್ನು ದೇಶದ ಅಭಿವೃದ್ಧಿ ಕೆಲಸಗಳಿಗಾಗಿ ವಿನಿಯೋಗಿಸಬೇಕು ಎಂದು ಒತ್ತಾಯಿಸಿದರು.

 ಚಳವಳಿಗಾರರನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ~ ಎಂದು ಟೀಕಿಸಿದ ಗಡ್ಕರಿ, `ರಾಮ್‌ದೇವ್ ತರಹದ ಹೋರಾಟಗಾರರನ್ನು ಬೆದರಿಸಲು, ಬ್ಲಾಕ್‌ಮೇಲ್ ಮಾಡಲು ಸಿಬಿಐ ಬಳಸಿಕೊಳ್ಳಲಾಗುತ್ತಿದೆ~ ಎಂದರು.

`ಕಪ್ಪು ಹಣ ವಾಪಸ್‌ಗಾಗಿ ರಾಮ್‌ದೇವ್ ನಡೆಸುತ್ತಿರುವ ಹೋರಾಟವನ್ನು ತಮ್ಮ ಪಕ್ಷ ಸಂಸತ್‌ಗೂ ಕೊಂಡೊಯ್ಯಲಿದೆ~ ಎಂದ ಅವರು, `ಸಾರ್ವತ್ರಿಕ ಚುನಾವಣೆ ಬಳಿಕ ಸೆಂಟ್ರಲ್ ಹಾಲ್‌ನಲ್ಲಿ ತಿರುಗಾಡುತ್ತಿರುವ ಬಹುತೇಕ ಜನರು ತಿಹಾರ್ ಜೈಲಿಗೆ ಹೋಗಲಿದ್ದಾರೆ~ ಎಂದು ಭವಿಷ್ಯ ನುಡಿದರು. ಎನ್‌ಡಿಎ ಸಂಚಾಲಕ ಶರದ್ ಯಾದವ್ ಅವರೂ ಇದ್ದರು.

ಸಮಾಜವಾದಿ ಪಕ್ಷದ ಬೆಂಬಲ:  ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರೂ ರಾಮ್‌ದೇವ್ ಅವರನ್ನು ಬೆಂಬಲಿಸಿದ್ದಾರೆ.

`ಇಂಥ ಹೋರಾಟವನ್ನು ಯಾರು ನಡೆಸಿದರೂ ಅವರನ್ನು ಪಕ್ಷ ಬೆಂಬಲಿಸುತ್ತದೆ ಎಂದಿರುವ ಮುಲಾಯಂ ಸಿಂಗ್, `ನಮ್ಮ ಪಕ್ಷ ಕಪ್ಪು ಹಣದ ವಿರುದ್ಧ ಇದೆ. ಕಪ್ಪು ಹಣ ವಾಪಸ್ ತರುವ ಬಗ್ಗೆ ಯಾರು ಮಾತನಾಡಿದರೂ ಅವರನ್ನು ಬೆಂಬಲಿಸಲಾಗುವುದು~ ಎಂದು ಅವರು ಹೇಳಿದ್ದಾರೆ.

ಕಪ್ಪು ಹಣ ವಾಪಸ್‌ಗೆ ಮಾಯಾ ಆಗ್ರಹ: ಯುಪಿಎ ಸರ್ಕಾರಕ್ಕೆ ಹೊರಗಿನಿಂದ ಬೆಂಬಲಿಸುತ್ತಿರುವ ಬಿಎಸ್‌ಪಿ, ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸು ತರುವಂತೆ ಒತ್ತಾಯಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, `ಕಪ್ಪು ಹಣ ದೇಶಕ್ಕೆ ತರಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧ ನಡೆಸುವ ಯಾವುದೇ ಪಕ್ಷಾತೀತ ಹೋರಾಟಕ್ಕೆ ಬೆಂಬಲ ನೀಡಲಾಗುವುದು~ ಎಂದು ಹೇಳಿದ್ದಾರೆ.

ನಿತೀಶ್ ಬೆಂಬಲ: `ಸರಿಯಾದ ಉದ್ದೇಶಕ್ಕಾಗಿಯೇ ರಾಮ್‌ದೇವ್ ಧ್ವನಿ ಎತ್ತಿದ್ದಾರೆ. ಇದು ಸಾರ್ವಜನಿಕ ಹಿತಾಸಕ್ತಿ ವಿಷಯವಾಗಿದ್ದು, ಪಕ್ಷ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ~ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.