ADVERTISEMENT

ಕರಾವಳಿ ರಕ್ಷಣಾ ಪಡೆ ನೌಕೆ ಡಿಕ್ಕಿ: ಮೀನುಗಾರ ಸಾವು

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST

ರಾಮೇಶ್ವರ (ತಮಿಳುನಾಡು) (ಪಿಟಿಐ): ಪಂಬನ್ ಕಡಲಿನಲ್ಲಿ ಶುಕ್ರವಾರ ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಯ ನೌಕೆ ವಿರುದ್ಧ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಐವರು ಮೀನುಗಾರರಿದ್ದ ದೋಣಿಗೆ, ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ನೌಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ದರಿಂದ ಇಬ್ಭಾಗವಾದ ದೋಣಿ ಸಾಗರದಲ್ಲಿ ಮುಳುಗಿ 19 ವರ್ಷದ ಒಬ್ಬ ಮೀನುಗಾರ ಮೃತಪಟ್ಟಿದ್ದ. ಉಳಿದವರನ್ನು ಮತ್ತೊಂದು ದೋಣಿಯ ಮೀನುಗಾರರು ರಕ್ಷಿಸಿದ್ದರು. ಘಟನೆಯಲ್ಲಿ ಬದುಕುಳಿದ ಮೀನುಗಾರರು ಪಡೆಯ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

ಶವ ಇಟ್ಟು ಪ್ರತಿಭಟನೆ: ತಮ್ಮ ದೋಣಿಗೆ ಡಿಕ್ಕಿ ಹೊಡೆದು ಪರಾರಿಯಾದ ನೌಕೆಯ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಮತ್ತು ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಮೀನುಗಾರರು ಶನಿವಾರ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ತಮ್ಮ ನೌಕೆ ಕಾರಣ ಎಂಬ ಹೇಳಿಕೆಯನ್ನು ಕರಾವಳಿ ಪಡೆಯ ಕಮಾಂಡರ್ ಹರೀಶ್ ಮೋರೆ ತಳ್ಳಿಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.