ADVERTISEMENT

ಕರ್ನಾಟಕದ ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿತ್ತು: ಅಮಿತ್ ಶಾ

‘ಯಡಿಯೂರಪ್ಪ ಏಳು ದಿನ ಕಾಲಾವಕಾಶ ಕೇಳಿರಲಿಲ್ಲ’

ಪಿಟಿಐ
Published 21 ಮೇ 2018, 12:24 IST
Last Updated 21 ಮೇ 2018, 12:24 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿತ್ತು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲನ್ನು ಗೆಲುವೆಂದು ಬಿಂಬಿಸಲು ಕಾಂಗ್ರೆಸ್‌ ಹೊಸ ದಾರಿಯನ್ನು ಕಂಡುಕೊಂಡಿದೆ ಎಂದು ಹೇಳಿದರು.

ಹೆಚ್ಚಿನ ಎಲ್ಲ ಸಚಿವರು ಸೋತ ಹೊರತಾಗಿಯೂ ತಾವು ಸಂಭ್ರಮಿಸುತ್ತಿರುವುದು ಯಾಕೆ ಎಂಬುದನ್ನು ಕಾಂಗ್ರೆಸ್‌ನವರು ರಾಜ್ಯದ ಜನತೆಗೆ ವಿವರಿಸಲಿ ಎಂದು ಶಾ ಹೇಳಿದರು.

ADVERTISEMENT

‘ಕೇವಲ ಕಾಂಗ್ರೆಸ್ ಮತ್ತು ಜೆಡಿ(ಎಸ್‌)ನವರು ಸಂಭ್ರಮಿಸುತ್ತಿದ್ದಾರೆಯೇ ಹೊರತು ಕರ್ನಾಟಕದ ಜನತೆಯಲ್ಲ’ ಎಂದು ಅವರು ಹೇಳಿದರು.

‘ಸರ್ಕಾರ ರಚನೆಗೆ ನಾವು ಹಕ್ಕು ಮಂಡಿಸದೇ ಇರುತ್ತಿದ್ದರೆ, ಕರ್ನಾಟಕದ ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತಿತ್ತು. ಆದರೆ, ಸೋಲನ್ನೇ ಗೆಲುವು ಎಂದು ಬಿಂಬಿಸಲು ಕಾಂಗ್ರೆಸ್ ಹೊಸ ದಾರಿಯನ್ನು ಕಂಡುಕೊಂಡಿತು. ಇದು 2019ರವರೆಗೆ ಮುಂದುವರಿಯಲಿದ್ದು, ಇದರಿಂದ ಬಿಜೆಪಿಗೇ ಲಾಭವಾಗಲಿದೆ’ ಎಂದು ಶಾ ಅಭಿಪ್ರಾಯಪಟ್ಟರು.

‘ಕಾಂಗ್ರೆಸ್‌ಗೆ ಈಗ ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಬರಲಾರಂಭವಾಗಿದೆ. ಚುನಾವಣೆ ಸೋತಾಗಲೂ ಈ ನಂಬಿಕೆ ಉಳಿಯುವಂತಾಗಲಿ’ ಎಂದು ಶಾ ವ್ಯಂಗ್ಯವಾಡಿದರು.

‘ಏಳು ದಿನ ಕಾಲಾವಕಾಶ ಕೇಳಿಲ್ಲ’: ವಿಶ್ವಾಸಮತ ಸಾಬೀತುಪಡಿಸಲು ಬಿ.ಎಸ್‌.ಯಡಿಯೂರಪ್ಪ ಏಳು ದಿನ ಕಾಲಾವಕಾಶ ಕೇಳಿದ್ದರು ಎಂದು ಕಾಂಗ್ರೆಸ್ ವಕೀಲರು ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದರು ಎಂದು ಶಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.