ADVERTISEMENT

ಕಲೈಞ್ಞರ್ ಟಿವಿ ಕಚೇರಿ ಮೇಲೆ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:10 IST
Last Updated 18 ಫೆಬ್ರುವರಿ 2011, 17:10 IST

ಚೆನ್ನೈ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ನಸುಕಿನಲ್ಲೇ ಡಿಎಂಕೆ ನಾಯಕ ಕರುಣಾನಿಧಿ ಅವರ ಕುಟುಂಬ ನಡೆಸುತ್ತಿರುವ ಕಲೈಞ್ಞರ್ ಟಿವಿ ಕೇಂದ್ರದ ಹಿರಿಯ ನಿರ್ವಾಹಕರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತು.

ಈ ಹಗರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಚಾನೆಲ್ ಹೇಳಿಕೊಂಡ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.ತರಂಗಾಂತರ ಹಗರಣಕ್ಕೆ ಸಂಬಂಧ ಇರಬಹುದಾದ ಕೆಲವು ಹಣಕಾಸು ವ್ಯವಹಾರಗಳ ಬಗೆಗೆ ತನಿಖೆ ನಡೆಸಲು ಈ ದಾಳಿ ನಡೆಸಲಾಗಿದೆ. ಸ್ವಾನ್ ಟೆಲಿಕಾಂನ ಪ್ರವರ್ತಕ ಶಾಹಿತ್ ಉಸ್ಮಾನ್ ಬಲ್ವಾ ಮತ್ತು ಚಾನೆಲ್ ನಡುವೆ ಸಂಪರ್ಕ ಇತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಯುಎಎಸ್ ಪರವಾನಗಿ ಮತ್ತು ರೇಡಿಯೊ ತರಂಗಾಂತರ ಪಡೆಯುವ ನಿಟ್ಟಿನಲ್ಲಿ ಬಲ್ವಾ ಅವರಿಗೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ನೆರವಾಗಿದ್ದರು ಎನ್ನಲಾಗಿದೆ. ಬಲ್ವಾ ಅವರ ಡಿ.ಬಿ.ರಿಯಾಲ್ಟಿ ಗುಂಪು ಕಲೈಞ್ಞರ್ ಟಿವಿಗೆ 214 ಕೋಟಿ ರೂಪಾಯಿಗಳ ಸಾಲ ಒದಗಿಸಿತ್ತು. ಇದರಿಂದಾಗಿ ಹಗರಣದಲ್ಲಿ ಕಲೈಞ್ಞರ್ ಟಿವಿ ಶಾಮೀಲಾದ ಸಂಶಯ ಎದುರಾಗಿದೆ.

ಮೆ. ಸಿನಿಯುಗ್ ಫಿಲಂಸ್ ಡಿ.ಬಿ. ಕಂಪೆನಿ ಗುಂಪಿನಿಂದ ಹಣ ಪಡೆದು ಕಲೈಞ್ಞರ್ ಟಿವಿಗೆ ಈ ಹಣಕಾಸಿನ ನೆರವು ನೀಡಿತ್ತು. ಡಿ.ಬಿ. ಕಂಪೆನಿಯಲ್ಲಿ ಬಲ್ವಾ ಅವರ ಕುಟುಂಬ ಸದಸ್ಯರು ಷೇರುದಾರರು ಇಲ್ಲವೇ ನಿರ್ದೇಶಕರಾಗಿದ್ದಾರೆ ಎಂದು ಸಿಬಿಐ ಈ ಮೊದಲೇ ನ್ಯಾಯಾಲಯವೊಂದಕ್ಕೆ ತಿಳಿಸಿತ್ತು.

ಕಲೈಞ್ಞರ್ ಟಿವಿಯಲ್ಲಿ ಕರುಣಾನಿಧಿ ಅವರ ಪತ್ನಿ ದಯಾಳು ಅವರಿಗೆ ಶೇ 60ರಷ್ಟು ಒಡೆತನ ಇದ್ದರೆ, ಅವರ ಪುತ್ರಿ ಹಾಗೂ ಸಂಸದೆ ಕನಿಮೋಳಿ ಅವರಿಗೆ ಶೇ 20ರಷ್ಟು ಒಡೆತನ ಇದೆ.

ಆದರೆ ಡಿ.ಬಿ. ರಿಯಾಲ್ಟಿ ಕಂಪೆನಿಯಿಂದ ಟಿವಿ ಚಾನೆಲ್ ಯಾವುದೇ ಲಂಚ ಪಡೆದಿಲ್ಲ ಎಂದು ಕಲೈಞ್ಞರ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.