ADVERTISEMENT

`ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅಕ್ರಮ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST

ನವದೆಹಲಿ (ಐಎಎನ್‌ಎಸ್): 1993ರಿಂದ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿರುವುದು ಅಕ್ರಮವಾಗಿದ್ದು ಇವುಗಳ ಲೈಸನ್ಸ್ ರದ್ದುಗೊಳಿಸಿ ತಪ್ಪಿತಸ್ಥರ ವಿರುದ್ಧ ತನಿಖೆ ಕೈಗೊಳ್ಳಲು ಈ ಸಂಬಂಧ ರಚಿಸಲಾದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ ಸಲಹೆ ಮಾಡಿದ್ದಾರೆ.

ಸಮಿತಿಯ ವರದಿಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಬ್ಯಾನರ್ಜಿ, `ಹಂಚಿಕೆಯ ಇಡೀ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸುವುದು ಅಗತ್ಯವಾಗಿದೆ. ನಿಕ್ಷೇಪಗಳ ಹಂಚಿಕೆಯನ್ನು ಅಕ್ರಮವಾಗಿ ಕೈಗೊಳ್ಳಲಾಗಿದ್ದು ಅವುಗಳ ಲೈಸನ್ಸ್ ರದ್ದಾಗಬೇಕು' ಎಂದರು.

ಆದರೆ ಇಂತಹ ಹಂಚಿಕೆಯಿಂದ ಉಂಟಾದ ನಷ್ಟದ ಮೊತ್ತದ ಕುರಿತು ಬ್ಯಾನರ್ಜಿ ಮಾಹಿತಿ ನೀಡಲಿಲ್ಲ. `ಪದೇ ಪದೇ ಮನವಿಯ ನಂತರವೂ ಕಲ್ಲಿದ್ದಲು ಸಚಿವಾಲಯ ಈ ಕುರಿತು ನಮಗೆ ಯಾವುದೇ ಮಾಹಿತಿ ಒದಗಿಸಲಿಲ್ಲ' ಎಂದರು.

ಸಮಿತಿ ವರದಿಯ ಅನ್ವಯ, ಕಲ್ಲಿದ್ದಲು ನಿಕ್ಷೇಪಗಳ ಅಕ್ರಮ ಹಂಚಿಕೆಯಿಂದಾಗಿ ಸರ್ಕಾರಕ್ಕೆ ಬರಬೇಕಾದ ಆದಾಯ ಬಾರದೆ ಇದು ಖಾಸಗಿಯವರಿಗೆ ಮಾತ್ರ ಲಾಭ ತಂದುಕೊಟ್ಟಿತು. ಹಂಚಿಕೆ ಮಾಡಬೇಕಾದ ಕಂಪೆನಿಯ ಬಗ್ಗೆ ವಾಸ್ತವ ಸ್ಥಿತಿಗತಿಯನ್ನು ಸರಿಯಾಗಿ ತಿಳಿದುಕೊಳ್ಳದೆ ಲೈಸನ್ಸ್ ನೀಡಲಾಗಿದೆ. ಇಂತಹ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ತನಿಖೆ ಕೈಗೊಳ್ಳುವುದು ಅತ್ಯಗತ್ಯ ಎಂದು ತಿಳಿಸಲಾಗಿದೆ.

ಲಾಭದ ಉದ್ದೇಶಕ್ಕೆ ಅಧಿಕಾರಿಗಳು ಹಾಗೂ ಕಲ್ಲಿದ್ದಲು ಕಂಪೆನಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ಇಡುವುದು ಅಗತ್ಯ ಎಂದೂ ಸಮಿತಿ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.