ADVERTISEMENT

ಕಸ್ತೂರಿ ರಂಗನ್ ವರದಿಗೆ ಗಾಡ್ಗೀಳ್ ಆಕ್ಷೇಪ

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 19 ಮೇ 2013, 19:59 IST
Last Updated 19 ಮೇ 2013, 19:59 IST

ಪಣಜಿ (ಐಎಎನ್‌ಎಸ್): ಸೂಕ್ಷ್ಮ ಪರಿಸರ ಪ್ರದೇಶವೆಂದೇ ಗುರುತಿಸುವ ಪಶ್ಚಿಮ ಘಟ್ಟಗಳ ಸಂಕ್ಷಣೆ ಕುರಿತು ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ (ಎಚ್‌ಎಲ್‌ಡಬ್ಲುಜಿ) ಸಿದ್ಧಪಡಿಸಿರುವ ವರದಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಅದೊಂದು `ನಿರುಂಕುಶ ಮನಸ್ಥಿತಿಯವರು' ತಯಾರಿಸಿರುವ ವರದಿ ಎಂದು ಟೀಕಿಸಿದ್ದಾರೆ.

ಈ ವರದಿಯಿಂದ ಪಶ್ಚಿಮ ಘಟ್ಟಗಳಲ್ಲಿರುವ ಸ್ವಾಭಾವಿಕ ಸಂಪನ್ಮೂಲಗಳು ಲೂಟಿಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದು ಶ್ರೀಮಂತರು, ಅಧಿಕಾರಶಾಹಿ ವರ್ಗ ಹಾಗೂ ಜಾಗತೀಕರಣ ಪ್ರಪಂಚವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಿದ ವರದಿಯಾಗಿದೆ ಎಂದು ದೂರಿದ್ದಾರೆ.

`ಕಸ್ತೂರಿ ರಂಗನ್ ತಂಡದ ವರದಿಯಲ್ಲಿ ದೇಶದ ನೈರುತ್ಯ ಭಾಗಕ್ಕೆ ನೀರುಣಿಸುವ ಜಲಪಾತ್ರೆಯಾಗಿರುವ ಪಶ್ಚಿಮ ಘಟ್ಟವನ್ನು ಸಮಗ್ರವಾಗಿ ರಕ್ಷಿಸುವ ಬದಲು, ಆರ್ಥಿಕವಾಗಿ ಅತಿಯಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದೆ' ಎಂದು ಗಾಡ್ಗೀಳ್ ಆರೋಪಿಸಿದ್ದಾರೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅಧ್ಯಯನ ನಡೆಸಿರುವ ಇಸ್ರೋ ಮಾಜಿ ಮುಖ್ಯಸ್ಥ  ಕಸ್ತೂರಿ ರಂಗನ್ ನೇತೃತ್ವದ ಹತ್ತು ಸದಸ್ಯರ ಉನ್ನತಮಟ್ಟದ ಕಾರ್ಯಪಡೆ, ಕೇಂದ್ರ ಸರ್ಕಾರಕ್ಕೆ ಕೆಲವು ಸಂಗತಿಗಳನ್ನು ಶಿಫಾರಸು ಮಾಡಿದೆ.  `ಎಚ್‌ಎಲ್‌ಡಬ್ಲುಜಿ' ವರದಿಗಿಂತ ಮುಂಚೆ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರು ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ವರದಿ ಸಲ್ಲಿಸಿದ್ದರು. ಅದರಲ್ಲಿ ಪಶ್ಚಿಮ ಘಟ್ಟಕ್ಕೆ ಮಾರಕವಾಗಿರುವ ಗೋವಾದ ಗಣಿಗಾರಿಕೆಯನ್ನು ಹತ್ತಿಕ್ಕುವ ಕುರಿತು ಕೆಲವು ಸಲಹೆಗಳನ್ನು ನೀಡಿದ್ದರು.

`ನಾವು ಪಶ್ಚಿಮ ಘಟ್ಟಗಳ ಕ್ಷೇತ್ರ ಭೇಟಿ ಮಾಡಿ, ಅಲ್ಲಿನ ಜನರನ್ನು ಸಂದರ್ಶಿಸಿ, ಚರ್ಚೆ ನಡೆಸಿ ತಯಾರಿಸಿರುವ ವರದಿಯನ್ನು ಕೇಂದ್ರದ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ್ದೇವೆ. ಆ ವರದಿಯಲ್ಲಿ ಪಶ್ಚಿಮ ಘಟ್ಟಗಳನ್ನು ರಕ್ಷಿಸುವಲ್ಲಿ ತಳಮಟ್ಟದ ಮಾಹಿತಿಗಳು ಹೇಗೆ ನೆರವಾಗುತ್ತವೆ ಎಂಬ ವಿಚಾರವನ್ನು ಸೇರಿಸಿದ್ದೆವು' ಎಂದು ಗಾಡ್ಗೀಳ್ ಪರಿಸರ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.