ADVERTISEMENT

ಕಾಂಗ್ರೆಸ್‌ನ ಜಾತಿ ಸಮೀಕರಣ ತಿರುಗುಬಾಣ?

ಮೀಸಲಾತಿ ಲೆಕ್ಕಾಚಾರ– ಒಬಿಸಿ, ಪಟೇಲ್‌ ಸಮುದಾಯ ಜತೆ ಸಾಗದು: ಬಿಜೆಪಿ ವಿಶ್ವಾಸ

ಪಿಟಿಐ
Published 29 ಅಕ್ಟೋಬರ್ 2017, 19:31 IST
Last Updated 29 ಅಕ್ಟೋಬರ್ 2017, 19:31 IST
ಕಾಂಗ್ರೆಸ್‌ನ ಜಾತಿ ಸಮೀಕರಣ ತಿರುಗುಬಾಣ?
ಕಾಂಗ್ರೆಸ್‌ನ ಜಾತಿ ಸಮೀಕರಣ ತಿರುಗುಬಾಣ?   

ನವದೆಹಲಿ: ಹಿಂದುಳಿದ ಹಲವು ಜಾತಿಗಳ ಮತ ಪಡೆದು ಬಿಜೆಪಿಯನ್ನು ಸೋಲಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಆದರೆ ಈ ಪ್ರಯತ್ನವೇ ಕಾಂಗ್ರೆಸ್‌ ಪಕ್ಷಕ್ಕೆ ತಿರುಗುಬಾಣ ಆಗಲಿದೆ ಎಂದು ಬಿಜೆಪಿ ನಂಬಿದೆ.

ಒಬಿಸಿ ಮತ್ತು ಪಟೇಲ್‌ ಸಮುದಾಯ ಪರಸ್ಪರ ವಿರುದ್ಧವಾದ ಗುಂಪುಗಳು. ಈ ಗುಂಪುಗಳ ಹಿತಾಸಕ್ತಿಗಳು ಮತ್ತು ಆಕಾಂಕ್ಷೆಗಳು ಪರಸ್ಪರ ವಿರುದ್ಧವಾಗಿವೆ. ಹಾಗಾಗಿ ಒಬಿಸಿ ಮತ್ತು ಪಟೇಲ್‌ ಸಮುದಾಯವನ್ನು ಜತೆಗಿರಿಸಿಕೊಂಡು ಮುಂದೆ ಸಾಗುವ ಕಾಂಗ್ರೆಸ್‌ ಕಾರ್ಯತಂತ್ರ ಫಲ ನೀಡದು
ಎಂದು ಗುಜರಾತ್‌ ಬಿಜೆಪಿ ಪ್ರಚಾರ ಸಮಿತಿಯಲ್ಲಿರುವ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಇದು ವಿರೋಧಾಭಾಸಗಳ ಕಂತೆ ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ಬಂದರೆ ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡುವ ಬೇಡಿಕೆಗೆ ಒಪ್ಪಿಗೆ ಸೂಚಿಸಲು ಪಟೇಲ್‌ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಅವರು ಕಾಂಗ್ರೆಸ್‌ಗೆ ನವೆಂಬರ್‌ 3ರ ಗಡುವು ಕೊಟ್ಟಿದ್ದಾರೆ. ಪಟೇಲ್‌ ಸಮುದಾಯ ಮತ್ತು ಹಿಂದುಳಿದ ವರ್ಗಗಳನ್ನು ಜತೆಗೇ ನಿಭಾಯಿಸುವುದು ಕಾಂಗ್ರೆಸ್‌ಗೆ ಕಷ್ಟ ಎಂಬುದನ್ನು ಇದು ಸೂಚಿಸುತ್ತದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ADVERTISEMENT

ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟೇ ಯುವ ನಾಯಕ ಅಲ್ಪೆಶ್‌ ಠಾಕೊರ್‌ ಅವರನ್ನು ಕಾಂಗ್ರೆಸ್‌ ಇತ್ತೀಚೆಗೆ ಪಕ್ಷಕ್ಕೆ ಸೇರಿಸಿಕೊಂಡಿದೆ. ಆದರೆ, ಈಗ ಇರುವ ಒಬಿಸಿ ಮೀಸಲಾತಿ ಪಟೇಲ್‌ ಸಮುದಾಯಕ್ಕೂ ಹಂಚಿ ಹೋಗಬಾರದು ಎಂಬ ಹೋರಾಟದ ಮುಂಚೂಣಿಯಲ್ಲಿ ಅಲ್ಪೆಶ್‌ ಇದ್ದಾರೆ. ಒಬಿಸಿ ಮೀಸಲಾತಿಯಲ್ಲಿ ಪಟೇಲ್‌ ಸಮುದಾಯ ಸೇರಲೇಬಾರದು ಎಂಬುದು ಅಲ್ಪೆಶ್‌ ಅವರ ಸ್ಪಷ್ಟ ನಿಲುವು.

1995ರ ಬಳಿಕ ಗುಜರಾತ್‌ನಲ್ಲಿ ಬಿಜೆಪಿ ಸೋತಿಲ್ಲ. ಹಿಂದುತ್ವ ಮತ್ತು ವಿಕಾಸ (ಅಭಿವೃದ್ಧಿ) ಬಿಜೆಪಿಯ ಮುಖ್ಯ ಮಂತ್ರಗಳು. ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಸುಮಾರು ಶೇ 10ರಷ್ಟು ಮತಗಳ ಅಂತರ ಇದೆ.

ಪಟೇಲ್‌ ಸಮುದಾಯ ಹಿಂದಿನಿಂದಲೂ ಬಿಜೆಪಿಯ ಹಿಂದೆ ದೃಢವಾಗಿ ನಿಂತಿದೆ. ಈಗ ಈ ಸಮುದಾಯದಲ್ಲಿ ಬಿಜೆಪಿಯ ಬಗ್ಗೆ ಅತೃಪ್ತಿ ಇರುವಂತೆ ಕಾಣಿಸುತ್ತಿದೆ. ಹಾಗಿದ್ದರೂ ಪಟೇಲ್‌ ಸಮುದಾಯದ ಬಹಳಷ್ಟು ಮುಖಂಡರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಸಮುದಾಯದ ಹಲವು ನಾಯಕರೇ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೇಶೂಭಾಯ್‌ ಪಟೇಲ್‌ ಅವರಂತಹ ಪಟೇಲ್‌ ಸಮುದಾಯದ ನಾಯಕನೇ ಗುಜರಾತ್‌ ಪರಿವರ್ತನ್‌ ಪಾರ್ಟಿಯ (ಜಿಪಿಪಿ) ಮೂಲಕ 2012ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದಾಗ ಸಿಕ್ಕಿದ್ದು
ಶೇ 4ರಷ್ಟು  ಮತಗಳು ಮಾತ್ರ. ಈ ಪಕ್ಷ ಗೆದ್ದದ್ದು ಎರಡು ಕ್ಷೇತ್ರಗಳಲ್ಲಿ. ಬಳಿಕ ಬಿಜೆಪಿಯಲ್ಲಿ ಜಿಪಿಪಿ ವಿಲೀನವಾಯಿತು. ಹಾಗಾಗಿ ಪಟೇಲ್‌ ಸಮುದಾಯ ಬಿಜೆಪಿ ಬಿಟ್ಟು ಹೋಗದು ಎಂಬ ವಾದ ಇದೆ.

ಆದರೆ, ಹಾರ್ದಿಕ್‌ ಪಟೇಲ್ ಅವರ ಹೋರಾಟದಿಂದಾಗಿ ‍ಪಟೇಲ್‌ ಸಮುದಾಯ ಬಿಜೆಪಿಯ ವಿರುದ್ಧ ನಿಂತಿದೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಕೇಶೂಭಾಯ್‌ ಪಟೇಲ್‌ ಅವರ ಹೋರಾಟ ಇದ್ದದ್ದು ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ. ಆದರೆ ಹಾರ್ದಿಕ್‌
ಅವರದ್ದು ಸಮುದಾಯಕ್ಕೆ ಹೆಚ್ಚು ಹತ್ತಿರವಾಗಿರುವ ಹೋರಾಟ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಬಿಸಿ ತುಪ್ಪವಾದ ಮೀಸಲಾತಿ

ಮೀಸಲಾತಿಯು ಶೇ 50ರಷ್ಟನ್ನು ಮೀರಬಾರದು ಎಂಬುದು ಸಾಂವಿಧಾನಿಕ ನಿಯಮ. ಹಾಗಾಗಿ ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ಕೊಡುವುದು ಯಾವುದೇ ರಾಜಕೀಯ ಪಕ್ಷಕ್ಕೂ ಕಷ್ಟ.

ಪಟೇಲ್‌ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಭರವಸೆ ಕೊಟ್ಟರೂ ಅದು ಚುನಾವಣೆಯಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡುತ್ತದೆ. ಇಂತಹ ಭರವಸೆ ಕೊಟ್ಟರೆ ಗುಜರಾತ್‌ನಲ್ಲಿ ಶೇ 40ರಷ್ಟಿರುವ ಒಬಿಸಿಗೆ ಸೇರಿದ ಜಾತಿಗಳ ಸಿಟ್ಟಿಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಹಾರ್ದಿಕ್‌ ಅವರ ಬೇಡಿಕೆಯನ್ನು ಒಪ್ಪುವುದು ಕಾಂಗ್ರೆಸ್‌ಗೆ ಸುಲಭವಲ್ಲ.

ಬಿಜೆಪಿ–ಕಾಂಗ್ರೆಸ್‌ನ ಬಲ, ದೌರ್ಬಲ್ಯ

ಬಿಜೆಪಿಗೆ ಮೋದಿ ಅವರ ಜನಪ್ರಿಯತೆಯೇ ಮುಖ್ಯ ಶಕ್ತಿ. ಜತೆಗೆ ರಾಜ್ಯದಲ್ಲಿ ಸಂಘಟನಾತ್ಮಕವಾಗಿ ಕಾಂಗ್ರೆಸ್‌ಗಿಂತ ಬಿಜೆಪಿ ಬಹಳ ಬಲವಾಗಿದೆ. ಶಂಕರ್‌ ಸಿಂಹ ವಾಘೆಲಾ ಇತ್ತೀಚೆಗೆ ಕಾಂಗ್ರೆಸ್‌ ತೊರೆದಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಆಗುವ ಹಾನಿ ಅಧಿಕಾರ ಉಳಿಸಕೊಳ್ಳಲು ಬಿಜೆಪಿಗೆ ನೆರವಾದೀತು ಎಂಬ ನಂಬಿಕೆ ಬಿಜೆಪಿ ಮುಖಂಡರಲ್ಲಿ ಇದೆ.

ಬಿಜೆಪಿಯ ಅಭಿವೃದ್ಧಿ ಮಾದರಿಯ ಬಗ್ಗೆ ಕಾಂಗ್ರೆಸ್‌ ಇತ್ತೀಚೆಗೆ ಮಾಡುತ್ತಿರುವ ಟೀಕೆ ಜನರನ್ನು ಆಕರ್ಷಿಸಿದೆ. ಜತೆಗೆ ಬಿಜೆಪಿಯ ಜತೆಗಿದ್ದ ಪಟೇಲ್‌ ಸಮುದಾಯಕ್ಕೆ ಆ ಪಕ್ಷದ ಬಗ್ಗೆ ಅತೃಪ್ತಿ ಮೂಡಿದೆ. ಹೀಗಾಗಿ ಎರಡು ದಶಕಕ್ಕೂ ಹೆಚ್ಚಿನ ಬಿಜೆಪಿ ಆಡಳಿತವನ್ನು ಕೊನೆಗೊಳಿಸಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.