ADVERTISEMENT

ಕಾದು ನೋಡಿ : ಬಿಎಸ್‌ವೈಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ನವದೆಹಲಿ: ರಾಜಕೀಯವಾಗಿ ದುಡುಕಿನ ತೀರ್ಮಾನ ಕೈಗೊಳ್ಳದೆ ಸ್ವಲ್ಪ ಸಮಯ ಸಂಯಮದಿಂದ ಕಾಯುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲಹೆ ನೀಡುವಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸೂಚಿಸಿದೆ.

ಶೋಭಾ ಮಂಗಳವಾರ ದೆಹಲಿಗೆ ಧಾವಿಸಿದ ವೇಳೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದರು. ಚರ್ಚೆ ಸಮಯದಲ್ಲಿ ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ ಮುಖಂಡರು, ಪಕ್ಷ- ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವಂಥ ಕಠಿಣ ನಿರ್ಧಾರ ಮಾಡದೆ ಸಂಯಮ ತೋರುವಂತೆ ಸಲಹೆ ನೀಡಿ ಎಂದಿದ್ದಾರೆ.

ರಾಜ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಾವಾಗಲೀ ಅಥವಾ ಜೇಟ್ಲಿ ಅವರಾಗಲೀ ರಾಜ್ಯಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಸಮಾಲೋಚಿಸಿ ಸಮಸ್ಯೆ ಬಗೆಹರಿಸುವ ಇಂಗಿತವನ್ನು ಗಡ್ಕರಿ ವ್ಯಕ್ತಮಾಡಿದ್ದಾರೆ.

ಮುಖಂಡರ ಸಂದೇಶ ಹೊತ್ತು ಕರಂದ್ಲಾಜೆ ಬೆಂಗಳೂರಿಗೆ ಹಿಂತಿರುಗಿದ್ದಾರೆ. ತಮ್ಮನ್ನು ಪುನಃ ಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ಇದೇ 15ರವರೆಗೆ ಗಡುವು ನೀಡಿದ್ದಾರೆ. ಇದರಿಂದ ಹೈಕಮಾಂಡ್ ಕರ್ನಾಟಕದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.

ಈ ಮಧ್ಯೆ, ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾಗಿರುವ ಹೈಕಮಾಂಡ್, ಯಡಿಯೂರಪ್ಪ ಅವರ ಮೇಲಿನ ಆರೋಪಗಳನ್ನು ಕುರಿತು ಅಧ್ಯಯನ ನಡೆಸಿ ಅಭಿಪ್ರಾಯ ತಿಳಿಸುವಂತೆ ಕೆಲ ಕಾನೂನು ತಜ್ಞರಿಗೆ ಕೇಳಿದೆ. ತಮ್ಮ ನಡುವಿನ ಭಿನ್ನಾಭಿಪ್ರಾಯ ಕುರಿತು ಯಾವುದೇ ಹೇಳಿಕೆ ನೀಡದಂತೆ ಪಕ್ಷ ರಾಜ್ಯ ಬಿಜೆಪಿ ಮುಖಂಡರಿಗೆ ಸೂಚಿಸಿದೆ.

ಬಿಜೆಪಿ ಹೈಕಮಾಂಡ್‌ನಲ್ಲೂ ಗುಂಪುಗಾರಿಕೆ ಇದ್ದು, ಹಿರಿಯ ಮುಖಂಡರಾದ ಅಡ್ವಾಣಿ, ವೆಂಕಯ್ಯನಾಯ್ಡು ಮತ್ತು ಸುಷ್ಮಾ ಸ್ವರಾಜ್ ಯಡಿಯೂರಪ್ಪ ಅವರಿಗೆ ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡುವುದಕ್ಕೆ ವಿರೋಧ ಮಾಡುತ್ತಿದ್ದಾರೆ. ನಿತಿನ್ ಗಡ್ಕರಿ, ರಾಜ್‌ನಾಥ್‌ಸಿಂಗ್ ಯಡಿಯೂರಪ್ಪ ಅವರ ಬಗ್ಗೆ ಅನುಕಂಪ ಹೊಂದಿದ್ದಾರೆ. ಅರುಣ್ ಜೇಟ್ಲಿ ತಟಸ್ಥ ಆಗಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
 
ಶೋಭಾ ಕರಂದ್ಲಾಜೆ ಯಡಿಯೂರಪ್ಪ ಅವರ ನಿಷ್ಠ ಬಣದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಮೂಲಕ ಹೈಕಮಾಂಡ್ ಸಂದೇಶ ರವಾನಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.