ADVERTISEMENT

ಕಾಮನ್‌ವೆಲ್ತ್ ಹಗರಣ: ಇಂದು ದೋಷಾರೋಪ ನಿಗದಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ನಡೆದ ಬೀದಿ ದೀಪ ಅಳವಡಿಕೆ ಅವ್ಯವಹಾರ ಪ್ರಕರಣದ ಸಂಬಂಧ ಇಲ್ಲಿನ ಮಹಾನಗರ ಪಾಲಿಕೆಯ (ಎಂಸಿಡಿ) ನಾಲ್ವರು ಅಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ  ನ್ಯಾಯಾಲಯವು ಸೋಮವಾರ ದೋಷಾರೋಪ ನಿಗದಿ ಮಾಡಲಿದೆ.

ಪಾಲಿಕೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಡಿ.ಕೆ.ಸುಗುಣ್, ಕಾರ್ಯ ನಿರ್ವಾಹಕ ಎಂಜಿನಿಯರ್ ಒ.ಪಿ. ಮಹಾಲ, ಲೆಕ್ಕಾಧಿಕಾರಿ ರಾಜು ವಿ, ಟೆಂಡರ್ ಗುಮಾಸ್ತ ಗುರುಚರಣ್ ಸಿಂಗ್, ಸ್ವೇಸ್ಕ ಪವರ್‌ಟೆಕ್ ಎಂಜಿನಿಯರ್ಸ್‌ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಜೆ.ಪಿ.ಸಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಪಿ.ಸಿಂಗ್ ವಿರುದ್ಧ ದೋಷಾರೋಪ ನಿಗದಿ ಮಾಡುವುದಾಗಿ ಸಿಬಿಐ ವಿಶೇಷ ನ್ಯಾಯಾಧೀಶ ಪ್ರದೀಪ್ ಛಡ್ಡ ಫೆ.24ರಂದು ಪ್ರಕಟಿಸಿದ್ದರು. ಹಗರಣದಲ್ಲಿ ಈ ಆರು ಜನ ಭಾಗಿಯಾಗಿರುವುದು ಮೇಲ್ನೋಟಕ್ಕೇ ಕಂಡುಬಂದಿದೆ ಎಂದೂ ನ್ಯಾಯಾಧೀಶರು ಅಂದು ಹೇಳಿದ್ದರು.

ಕ್ರೀಡಾಕೂಟಕ್ಕೆ ಸಂಬಂಧಿಸಿದ 10 ಪ್ರತ್ಯೇಕ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಅದರಲ್ಲಿ ಈ ಬೀದಿದೀಪ ಅವ್ಯವಹಾರ ಪ್ರಕರಣವೂ ಸಹ ಒಂದಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ದೆಹಲಿಯ ಬೀದಿ ದೀಪ ವ್ಯವಸ್ಥೆಯನ್ನು ಅತ್ಯುನ್ನತ ದರ್ಜೆಗೇರಿಸುವ ಕಾಮಗಾರಿಗಾಗಿ 2008ರಲ್ಲಿ ಟೆಂಡರ್ ಕರೆಯಲಾಗಿತ್ತು.

ಸ್ವೇಸ್ಕ ಪವರ್‌ಟೆಕ್ ಸೇರಿದಂತೆ ಐದು ಕಂಪೆನಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಆದರೆ ಪಾಲಿಕೆ ಆಯುಕ್ತರು ಈ ಪೈಕಿ ಮೂರು ಕಂಪೆನಿಗಳ ಟೆಂಡರನ್ನು ಮಾತ್ರ ಅನುಮೋದಿಸಿದ್ದರು ಎಂದು ಸಿಬಿಐ ಆಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.