ಶ್ರೀನಗರ (ಐಎಎನ್‌ಎಸ್): ಕಾಶ್ಮೀರ ಪ್ರತ್ಯೇಕತಾವಾದಿ ಗುಲಾಮ ನಬಿ ಫಾಯಿಗೆ ಅಮೆರಿಕ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿ ಮುಖಂಡ ಸೈಯಿದ್ ಅಲಿ ಗಿಲಾನಿ ನೀಡಿದ ಬಂದ್ ಕರೆಯಿಂದ ಶನಿವಾರ ಇಡೀ ಕಾಶ್ಮೀರ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಅಂಗಡಿ ಮುಂಗಟ್ಟು, ಕಚೇರಿಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ಬ್ಯಾಂಕುಗಳು, ಅಂಚೆ ಕಚೇರಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಕೆಲವು ಖಾಸಗಿ ವಾಹನಗಳು ಮತ್ತು ಅಟೋರಿಕ್ಷಾಗಳು ಸಂಚರಿಸಿದವು.
ಬಾರಾಮುಲ್ಲಾ, ಕುಪ್ವಾರಾ, ಅನಂತ್‌ನಾಗ್, ಪುಲ್ವಾಮಾ, ಶೋಪಿಯಾನ್, ಕುಲ್ಗಂ, ಗಂಡೇರಬಾಲ್, ಬಡಗಾಂ ಮತ್ತು ಬಂಡಿಪೊರಾದಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ಇಡೀ ಕಾಶ್ಮೀರ ಕಣಿವೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವಿಶೇಷ ತನಿಖಾ ತಂಡ: ಪ್ರತ್ಯೇಕತಾವಾದಿ ಗುಲಾಂ ನಬಿ ಫಾಯಿ ನಡೆಸಿರುವ ರಾಷ್ಟ್ರವಿರೋಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಲಿದೆ.
ಮಾಹಿತಿ ಸಂಗ್ರಹದ ನಂತರ ಫಾಯಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಬುಡಗಾಂನ ಹಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗುತ್ತಿದ್ದು, ಕಾಶ್ಮೀರ ಕಣಿವೆಯಲ್ಲಿ ಫಾಯಿ ನಡೆಸಿರುವ ರಾಷ್ಟ್ರವಿರೋಧಿ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಡಿಜಿಪಿ ಕುಲದೀಪ್ ಖೋಡಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.