ನವದೆಹಲಿ: ದೇಶದ ಪೆಟ್ರೋಲಿಯಂ ಮಂತ್ರಿಗಳ ಮೇಲೆ ತೈಲ ಆಮದು ಲಾಬಿ, ಒತ್ತಡ ಹಾಗೂ ಬೆದರಿಕೆ ಹಾಕುತ್ತಲೇ ಬಂದಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಶುಕ್ರವಾರ ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ಅಲ್ಲದೆ ಯುಪಿಎಗೂ ತೀವ್ರ ಮುಜುಗರ ಉಂಟು ಮಾಡಿದೆ.
`ಈ ಹುದ್ದೆಯಲ್ಲಿದ್ದ ಪ್ರತಿಯೊಬ್ಬ ಸಚಿವರು ತೈಲ ಆಮದು ಕೂಟದ ಬೆದರಿಕೆಗೆ ಒಳಗಾಗಿದ್ದಾರೆ. ಇದರ ಜತೆಗೆ ಇನ್ನೂ ಕೆಲ ಲಾಬಿಗಳು ಕಾರ್ಯ ನಿರ್ವಹಿಸುತ್ತಿವೆ. ಅವು ಆಮದು ಕಡಿಮೆ ಮಾಡಿ, ಸ್ವಾವಲಂಬಿಯಾಗಲು ನಮಗೆ ಅವಕಾಶ ಕೊಡುತ್ತಿಲ್ಲ. ಆದರೆ ನಾನು ಇದಕ್ಕೆಲ್ಲ ಸೊಪ್ಪು ಹಾಕುವವನಲ್ಲ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಆದರೆ ಈ ರೀತಿ ಬೆದರಿಕೆ ಹಾಕುತ್ತಿರುವ ಶಕ್ತಿಗಳ ಹೆಸರನ್ನು ಮೊಯಿಲಿ ಬಹಿರಂಗಪಡಿಸಲಿಲ್ಲ. ಸಚಿವರ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಆಕ್ಷೇಪಿಸಿವೆ. `ನನ್ನ ಕಾಲಾವಧಿಯಲ್ಲಿ ಯಾವ ಲಾಬಿಯಿಂದಲೂ ನನಗಂತೂ ಬೆದರಿಕೆ ಬಂದಿರಲಿಲ್ಲ' ಎಂದು ಎನ್‌ಡಿಎ ಅವಧಿಯಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ರಾಮ ನಾಯಕ್ ಸವಾಲು ಹಾಕಿದ್ದಾರೆ.
`ದೇಶದ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಹಿತ ಕಾಯುವ ಮೊಯಿಲಿ ಮಹಾ ಸುಳ್ಳುಗಾರ' ಎಂದು ಸಿಪಿಐ ಮುಖಂಡ ಗುರುದಾಸ ದಾಸಗುಪ್ತಾ ಟೀಕಿಸಿದ್ದಾರೆ.
ಮೊಯಿಲಿ ಹೇಳಿದ್ದು: `ವಿದೇಶದಿಂದ ಪ್ರತಿವರ್ಷ 16 ಸಾವಿರ ಕೋಟಿ ಡಾಲರ್ (ಸುಮಾರು 8 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಕಚ್ಚಾ ತೈಲ ಆಮದು ಕಡಿಮೆ ಮಾಡದಂತೆ ಆಮದು ಲಾಬಿಗಳು ಒತ್ತಡ ಹೇರುತ್ತಿವೆ'.
`ನಾನು ಅಸಹಾಯಕನಲ್ಲ. ದೇಶಕ್ಕಾಗಿ ಕೆಲಸ ಮಾಡಲು ಬಂದಿರುವೆ. ಯಾರಾದರೂ ನನ್ನ ಮೇಲೆ ಪ್ರಭಾವ ಬೀರಿ ತೈಲ ಕ್ಷೇತ್ರದಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಇದ್ದರೆ ಅವರ ಎಣಿಕೆ ತಪ್ಪು'.
`ಕೆಲವು ಲಾಬಿಗಳು ತೈಲವನ್ನು ಆಮದು ಮಾಡಿಕೊಳ್ಳುವಂತೆ ಒತ್ತಡ ಹೇರಿದರೆ, ಇನ್ನೂ ಕೆಲವು ಲಾಬಿಗಳು ಆಮದು ಮಾಡಿಕೊಳ್ಳದಂತೆ ಪ್ರಭಾವ ಬೀರುತ್ತವೆ. ತೈಲ ಮತ್ತು ಅನಿಲದಂತಹ ನೈಸರ್ಗಿಕ ಸಂಪತ್ತು ನಮ್ಮ ನೆಲದಲ್ಲಿ ದೊರೆಯದಿದ್ದರೂ ದೇಶಕ್ಕೆ ಸಾಕಾಗುವಷ್ಟು ಹೇರಳವಾದ ತೈಲ ಹಾಗೂ ಅನಿಲ ಆಮದು ಮಾಡಿಕೊಳ್ಳಲಾಗಿದೆ. ಆದರೆ, ಅಧಿಕಾರಿಶಾಹಿಗಳ ಅಡ್ಡಗಾಲು ಮತ್ತು ವಿಳಂಬ ನೀತಿಯಿಂದ ಇವುಗಳ ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ' ಎಂದು ಮೊಯಿಲಿ ಆರೋಪಿಸಿದ್ದಾರೆ.
`ಅಗತ್ಯ ತೈಲವನ್ನು ಸ್ಥಳೀಯವಾಗಿ ಉತ್ಪಾದಿಸಲು ಉತ್ತೇಜಿಸದ್ದಿರೆ ಮತ್ತು ಸಮರ್ಪಕ ಬೆಲೆ ನಿರ್ಧಾರ ನೀತಿ ಅಳವಡಿಸಿಕೊಳ್ಳದಿದ್ದರೆ ತೈಲ ಆಮದು ಮುಂಬರುವ ದಿನಗಳಲ್ಲಿ ನಾಟಕೀಯವಾಗಿ ಹೆಚ್ಚುತ್ತಲೇ ಹೋಗುತ್ತದೆ. ಇದು ದೇಶಕ್ಕೆ ಹೊರೆಯಾಗುತ್ತದೆ. ನಾವು ಬೆಲೆ ತೆರಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.
ಅನಿಲ ಬೆಲೆ ಏರಿಕೆ ನೇರವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್)ಗೆ ಲಾಭ ಮಾಡಿಕೊಡುತ್ತದೆ ಎಂದು ಸಿಪಿಐ ನಾಯಕ ಗುರುದಾಸ್ ದಾಸಗುಪ್ತಾ ಅವರ ಆರೋಪಗಳಿಗೆ ಉತ್ತರಿಸಿದ ಮೊಯಿಲಿ, ತಾವು ಯಾವುದೇ ರೀತಿಯ ಮುಕ್ತ ಚರ್ಚೆ ಮತ್ತು ಸಲಹೆ ಸ್ವೀಕರಿಸಲು ಸಿದ್ಧ ಎಂದರು.
ವೈಯಕ್ತಿಕ ಹಗೆತನ, ಅಹಂಕಾರ, ಲಾಬಿ, ಟೀಕೆ ಮತ್ತು ರಾಜಕೀಯಕ್ಕಾಗಿ ರಾಷ್ಟ್ರಕ್ಕೆ ದ್ರೋಹ ಬಗೆಯುವುದು ಬೇಡ ಎಂದು ಸಲಹೆ ಮಾಡಿದರು.
ಕಟ್ಟುಕಥೆ: ಬಿಜೆಪಿ, ಎಡಪಕ್ಷಗಳ ಲೇವಡಿ
ತಮ್ಮ ಮೇಲೆ ತೈಲ ಆಮದು ಲಾಬಿಗಳ ಬೆದರಿಕೆ ಮತ್ತು ಒತ್ತಡವಿದೆ ಎಂಬ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಅವರ ಆರೋಪ ಕೇವಲ ಕಾಲ್ಪನಿಕ ಮತ್ತು ಕಟ್ಟುಕಥೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಎಡಪಕ್ಷಗಳು ಲೇವಡಿ ಮಾಡಿವೆ.
ತೈಲ ಲಾಬಿ ಕೆಲಸ ಮಾಡಿಲ್ಲ
ಪೆಟ್ರೋಲಿಯಂ ಖಾತೆ ಹಿಂದಿನ ಸಚಿವ ಜೈಪಾಲ್ ರೆಡ್ಡಿ ಅವರ ಖಾತೆ ಬದಲಾವಣೆ ಹಿಂದೆ ಯಾವುದೇ ತೈಲ ಲಾಬಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಅವರ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್, `ಲಾಬಿ ಬೆದರಿಕೆ ಅಥವಾ ಬೆದರಿಕೆ ಬಗ್ಗೆ ಮೊಯಿಲಿ ಅವರೇ ವಿವರಿಸಬೇಕೆ ಹೊರತು ಪಕ್ಷವಲ್ಲ. ಯಾವ ವಿಷಯ ಮತ್ತು ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಪಕ್ಷಕ್ಕೆ ತಿಳಿಯದು.
ಲಾಬಿಗಳಿದ್ದಲ್ಲಿ ಅವನ್ನು ಮಣಿಸಲು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುವುದನ್ನು ಅವರೇ ತಿಳಿಸಬೇಕು' ಎಂದಿದ್ದಾರೆ.
`ಖಾತೆ ಬದಲಾವಣೆ ಪ್ರಧಾನಿ ವಿವೇಚನೆಗೆ ಬಿಟ್ಟ ವಿಷಯವೇ ಹೊರತು ಲಾಬಿಗಳ ಒತ್ತಡಗಳಿಗೆ ಮಣಿದು ಜೈಪಾಲ್ ರೆಡ್ಡಿ ಅವರನ್ನು ಪೆಟ್ರೋಲಿಂ ಖಾತೆಯಿಂದ ಕೈಬಿಟ್ಟಿಲ್ಲ' ಎಂದೂ ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.