ADVERTISEMENT

ಕೃಷ್ಣಾ ನದಿ ನೀರು ಹಂಚಿಕೆ: ಆಂಧ್ರಪ್ರದೇಶದ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2016, 6:29 IST
Last Updated 19 ಅಕ್ಟೋಬರ್ 2016, 6:29 IST
ಕೃಷ್ಣಾ ನದಿ ನೀರು ಹಂಚಿಕೆ: ಆಂಧ್ರಪ್ರದೇಶದ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು
ಕೃಷ್ಣಾ ನದಿ ನೀರು ಹಂಚಿಕೆ: ಆಂಧ್ರಪ್ರದೇಶದ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು   

ನವದೆಹಲಿ: ಕೃಷ್ಣಾನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಯೋಜನಾವಾರು ನೀರು ಹಂಚಿಕೆ ಸಾಧ್ಯವಿಲ್ಲ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿದೆ.

ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕು. ಕೃಷ್ಣಾ ನದಿ ನೀರಿನ ಬಗ್ಗೆ ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬೃಜೇಶ್‌ ಕುಮಾರ್‌ ನೇತೃತ್ವದ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ ನೀಡಲಾಗಿರುವ ನೀರನ್ನೇ ತೆಲಂಗಾಣವು ಹಂಚಿಕೊಳ್ಳಬೇಕು ಎಂದು ತೀರ್ಪು ನೀಡಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಮಾತ್ರ ನೀರು ಹಂಚಿಕೆ ಸಾಧ್ಯ ಎಂದು ಹೇಳಿದೆ.

ADVERTISEMENT

ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ಅಂತಿಮ ಐ ತೀರ್ಪು ಮತ್ತು 2013ರ ಸ್ಪಷ್ಟತಾ ತೀರ್ಪುಗಳ ಮೂಲಕ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿಕೆಯಾಗಿದೆ.

ಆದರೆ ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ-2014ರ ಅಡಿಯಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಂಗಡಣೆಯಾದ ಕಾರಣ ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಕೋರಿತ್ತು, ಈ ಕೋರಿಕೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ವಿರೋಧ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.