ADVERTISEMENT

ಕೇಂದ್ರದ ಸಮರ್ಥನೆ ಒಪ್ಪದ ಸುಪ್ರೀಂ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಸ್ವತಃ ಪ್ರಧಾನಿ ಮನಮೋಹನ್ ಸಿಂಗ್‌ ಅವರೇ ಸ್ಪರ್ಧಾತ್ಮಕ ಹರಾಜು ನೀತಿಗೆ ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ  ಹಗರಣದಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ’ ಎಂದು ಕೆಂದ್ರ ಸರ್ಕಾರ ನೀಡಿರುವ ಸಮಜಾಯಿಷಿ ಸುಪ್ರೀಂಕೋರ್ಟ್‌ಗೆ ಮನವರಿಕೆ ಆಗಿಲ್ಲ.ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿ ತೆಗೆದುಕೊಂಡ ನಿರ್ಧಾರದ  ಬಗ್ಗೆ ವಿವರಣೆ ನೀಡುವಂತೆ ಕೇಂದ್ರಕ್ಕೆ ಮಂಗಳವಾರ ಕೋರ್ಟ್ ಸೂಚಿಸಿದೆ.

‘ಸ್ಪರ್ಧಾತ್ಮಕ ಹರಾಜು ನೀತಿಯನ್ನು  2004ರಲ್ಲಿಯೇ ರೂಪಿಸಲಾಗಿತ್ತು. ಆದರೂ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಈ ನೀತಿಯನ್ನು  ಯಾಕೆ ಪಾಲಿಸಿಲ್ಲ’ ಎಂದು ನ್ಯಾಯಮೂರ್ತಿ ಗಳಾದ ಆರ್.ಎಂ. ಲೋಧಾ, ಮದನ್‌ ಬಿ ಲೋಕೂರ ಹಾಗೂ ಕುರಿಯನ್‌ ಜೋಸೆಫ್ ನೇತೃತ್ವದ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

ಸರ್ಕಾರವನ್ನು ಸಮರ್ಥಿಸಿಕೊಂಡ ಅಟಾರ್ನಿ ಜನರಲ್‌ ಜಿ.ಇ. ವಾಹನ್ವತಿ, ‘ಈ ನೀತಿಯನ್ನು ರೂಪಿಸಿದ್ದು ಪ್ರಧಾನಿ ಮನಮೋಹನ್ ಸಿಂಗ್‌ ಅವರೇ ವಿನಾ ಬೇರೆ ಯಾರೂ ಅಲ್ಲ’ ಎಂದರು.

‘ಅದೇನೋ ಸರಿ. ಆದರೆ ನಾವು ಇಲ್ಲಿ ನಿಮ್ಮನ್ನು ಕೇಳುತ್ತಿರುವುದು ನಿಕ್ಷೇಪ ಹಂಚಿಕೆ ಕುರಿತ ನಿರ್ಧಾರದ ಪ್ರಕ್ರಿಯೆ ಯಾವ ರೀತಿ ಇತ್ತು ಎನ್ನುವುದನ್ನು. ಈ ವಿಚಾರವಾಗಿ ನ್ಯಾಯಾಲಯಕ್ಕೆ ವಿವರಣೆ ನೀಡಿ’ ಎಂದು ಪೀಠ ಹೇಳಿತು.

1991ರಲ್ಲಿ ದೇಶವು ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ  ಖಾಸಗಿಯವರಿಗೆ ನಿಕ್ಷೇಪ ಹಂಚಿಕೆ ಮಾಡಲು ಅನುಕೂಲವಾಗುವಂತೆ ನೀತಿಯನ್ನು ಬದಲಾಯಿಸಲಾಯಿತು’ ಎಂದು ವಾಹನ್ವತಿ ವಾದ ಮಂಡಿಸಿದರು.

‘ಆಗ ತೀವ್ರವಾಗಿ ವಿದ್ಯುತ್‌ ಕೊರತೆ ಉಂಟಾಗಿತ್ತು. ಕೋಲ್‌ ಇಂಡಿಯಾ ಕಂಪೆನಿ ಅಕ್ಷರಶಃ ದಿವಾಳಿ ಯಾಗಿತ್ತು.  ಅಂದಿನ ಆ ಸ್ಥಿತಿಯನ್ನು ನಿಭಾಯಿಸಲು ಕಾನೂನು ತಿದ್ದುಪಡಿ ಮಾಡಲಾಯಿತು’ ಎಂದೂ ಅವರು ವಿವರಿಸಿದರು.

ಖಾಸಗಿಯವರಿಗೆ ಕಲ್ಲಿದ್ದಲು ಗಣಿ ಗುತ್ತಿಗೆ ನೀಡಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡುವಾಗ ಅನುಸರಿಸಿದ ನೀತಿಯ ಸಿಂಧುತ್ವವನ್ನು ರುಜುವಾತು ಪಡಿಸುವಂತೆಯೂ ಪೀಠವು ವಾಹನ್ವತಿ ಅವರಿಗೆ ಸೂಚಿಸಿತು.

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ನಿರ್ಧರಿಸಲು ಪರಿಶೀಲನಾ ಸಮಿತಿ ಯನ್ನು ರಚಿಸಿದ್ದು ಯಾಕೆ ಎನ್ನುವುದನ್ನೂ ಪೀಠವು ಕೇಳಿತು.
ಈ ಮೊದಲು,  ಕೇಂದ್ರ ಗಣಿ ಯೋಜನೆ ಹಾಗೂ ವಿನ್ಯಾಸ ಸಂಸ್ಥೆ (ಸಿಎಂಪಿಡಿಐಎಲ್‌)  ಕಲ್ಲಿದ್ದಲು ನಿಕ್ಷೇಪ ಹಂಚಿಕೆಯನ್ನು ನಿರ್ಧರಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.