ADVERTISEMENT

ಕೊಚ್ಚಿ-ಶಿಲ್ಲಾಂಗ್ ರಿಕ್ಷಾ ಸವಾರಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 19:00 IST
Last Updated 17 ಏಪ್ರಿಲ್ 2011, 19:00 IST
ಕೊಚ್ಚಿ-ಶಿಲ್ಲಾಂಗ್ ರಿಕ್ಷಾ ಸವಾರಿ
ಕೊಚ್ಚಿ-ಶಿಲ್ಲಾಂಗ್ ರಿಕ್ಷಾ ಸವಾರಿ   

ಶಿಲ್ಲಾಂಗ್ (ಪಿಟಿಐ):  ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಎರಡು ಸಂಸ್ಥೆಗಳಿಗೆ ನಿಧಿ ಸಂಗ್ರಹಿಸುವ ಸಲುವಾಗಿ ಕೊಚ್ಚಿಯಿಂದ ಶಿಲ್ಲಾಂಗ್‌ಗೆ ಆಟೊ ರಿಕ್ಷಾದಲ್ಲಿ ಸವಾರಿ ನಡೆಸುವ ಕಾರ್ಯಕ್ರಮ ಭಾನುವಾರ ಕೊಚ್ಚಿಯಲ್ಲಿ ಆರಂಭವಾಗಿದ್ದು, 20ಕ್ಕೂ ಅಧಿಕ ದೇಶಗಳಿಂದ ಆಗಮಿಸಿದ 71 ತಂಡಗಳು 4 ಸಾವಿರ ಕಿಲೋಮೀಟರ್ ದೂರದ ಈ ಸವಾರಿಯಲ್ಲಿ ಪಾಲ್ಗೊಂಡಿವೆ.

ಬ್ರಿಟನ್ ಮೂಲದ ‘ದಿ ಅಡ್ವೆಂಚರಸ್’ ಸಂಸ್ಥೆ ಹಮ್ಮಿಕೊಂಡಿರುವ ಈ ಸವಾರಿ ಏಪ್ರಿಲ್ 30ರಂದು ಇಲ್ಲಿ ಕೊನೆಗೊಳ್ಳಲಿದೆ. ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಎರಡು ಮಾನವೀಯ ಸಂಘಟನೆಗಳಾದ ಇಂಟರ್‌ನ್ಯಾಷನಲ್ ರೆಸ್ಕ್ಯೂ ಕಾರ್ಪ್ಸ್ ಮತ್ತು ಸೋಸಿಯಲ್ ಚೇಂಜ್ ಆ್ಯಂಡ್ ಡೆವಲಪ್‌ಮೆಂಟ್ (ಎಸ್‌ಸಿಎಡಿ) ಸಂಸ್ಥೆಗಳಿಗೆ 80 ಸಾವಿರ ಪೌಂಡ್ ಧನ ಸಂಗ್ರಹಿಸುವ ಗುರಿಯನ್ನು ಈ ಕಾರ್ಯಕ್ರಮದ ಮೂಲಕ ಇಟ್ಟುಕೊಳ್ಳಲಾಗಿದೆ.

‘ಇದೊಂದು ರೇಸ್ ಸ್ಪರ್ಧೆಯೇನಲ್ಲ. ಹೀಗಾಗಿ ಮೊದಲು ಆಗಮಿಸಿದ್ದಕ್ಕೆ ಪ್ರಶಸ್ತಿ ಇಲ್ಲ. ಈ ದಾರಿಯಲ್ಲಿ ಕ್ರಮಿಸುವಾಗ ಸಾಹಸ ಪ್ರದರ್ಶಿಸುವ ತಂಡಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಮೂರು ಚಕ್ರದ ಆಟೊ ರಿಕ್ಷಾಗಳಲ್ಲಿ ಇಂತಹ ಸಾಹಸಗಳು ನಡೆದೀತು ಎಂಬ ಕಾರಣಕ್ಕೆ ರಿಕ್ಷಾ ಸವಾರಿಯನ್ನು ಆಯ್ದುಕೊಳ್ಳಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಗತ್ತಿನ ಯಾವುದೇ ಭಾಗದಲ್ಲಿ ಪ್ರಾಕೃತಿಕ ಅಥವಾ ಮಾನವ ನಿರ್ಮಿತ ಅನಾಹುತ ಸಂಭವಿಸಿದಾಗ ಅಲ್ಲಿಗೆ ಪರಿಹಾರ ತಂಡಗಳನ್ನು ಕಳುಹಿಸುವ ಕಾರ್ಯವನ್ನು ಇಂಟರ್‌ನ್ಯಾಷನಲ್ ರೆಸ್ಕ್ಯೂ ಕಾರ್ಪ್ಸ್ ಮಾಡುತ್ತಿದ್ದರೆ, ಎಸ್‌ಸಿಎಡಿ ಸಂಘಟನೆ ಭಾರತದಲ್ಲಿ ಬಡವರ ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಸಂಘಟನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.