ADVERTISEMENT

ಕೊನೆಗೂ ಕನಿಮೊಳಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2011, 19:30 IST
Last Updated 28 ನವೆಂಬರ್ 2011, 19:30 IST
ಕೊನೆಗೂ ಕನಿಮೊಳಿಗೆ ಜಾಮೀನು
ಕೊನೆಗೂ ಕನಿಮೊಳಿಗೆ ಜಾಮೀನು   

ನವದೆಹಲಿ (ಪಿಟಿಐ/ಐಎಎನ್‌ಎಸ್): ಡಿಎಂಕೆ ಸಂಸದೆ ಕನಿಮೊಳಿ ಸೇರಿದಂತೆ ಐವರು ಆರೋಪಿಗಳಿಗೆ ಇಲ್ಲಿನ ಹೈಕೋರ್ಟ್ ಸೋಮವಾರ ಜಾಮೀನು ನೀಡಿದ್ದು ಕಳೆದ ಆರು ತಿಂಗಳಿನಿಂದ ತಿಹಾರ್ ಜೈಲಿನಲ್ಲಿದ್ದ ಕನಿಮೊಳಿ ಮೊಗದಲ್ಲಿ ಈ ತೀರ್ಪು ನಿರಾಳ ಭಾವ ಮೂಡಿಸಿದೆ.

2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ವಿವಿಧ ಕಾರ್ಪೊರೇಟ್ ಉದ್ದಿಮೆಗಳ ಐವರು ಹಿರಿಯ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಕಳೆದ ವಾರ ಜಾಮೀನು ನೀಡುವಾಗ ವಿಧಿಸಿರುವ ಷರತ್ತುಗಳೇ ಈ ಐವರಿಗೂ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ವಿ.ಕೆ. ಶಾಲಿ ಹೇಳಿದ್ದಾರೆ.

ಈ ಐವರು ಆರೋಪಿಗಳಿಗೆ ತಲಾ ರೂ 5 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಖಾತರಿ ನೀಡುವಂತೆ ನ್ಯಾಯಮೂರ್ತಿ ತೀರ್ಪಿನಲ್ಲಿ ಹೇಳಿದ್ದಾರೆ.

ಕಲೈಂಜ್ಞರ್ ವಾಹಿನಿ ಕಾರ್ಯನಿರ್ವಾಹಕ ನಿರ್ದೇಶಕ ಶರತ್ ಕುಮಾರ್, ಬಾಲಿವುಡ್ ಸಿನಿಮಾ ನಿರ್ಮಾಪಕ ಕರೀಂ ಮೊರಾನಿ, ಕುಸೆಗಾಂವ್ ಫ್ರೂಟ್ಸ್ ಮತ್ತು ವೆಜಿಟೆಬಲ್ಸ್ ಕಂಪೆನಿ ನಿರ್ದೇಶಕರಾದ ರಾಜೀವ್ ಅಗರ್‌ವಾಲ್ ಮತ್ತು ಆಸಿಫ್ ಬಲ್ವಾ ಸೋಮವಾರ ಜಾಮೀನು ಪಡೆದುಕೊಂಡ ಇತರ ನಾಲ್ವರು.

ದೂರಸಂಪರ್ಕ ಇಲಾಖೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹೂರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಬಿಐ ವಿರೋಧಿಸಿದ್ದರಿಂದ ಈ ಕುರಿತ ಆದೇಶವನ್ನು ಕಾಯ್ದಿರಿಸಿರುವುದಾಗಿ ಹೇಳಿದ ನ್ಯಾಯಮೂರ್ತಿ ಶಾಲಿ, `ಸಿಬಿಐ ಆಕ್ಷೇಪಕ್ಕೆ ನಿಮ್ಮ ಪ್ರತಿಕ್ರಿಯೆ ದಾಖಲಿಸಿ~ ಎಂದೂ  ಬೆಹೂರಾ ಪರ ವಕೀಲರಿಗೆ ಸೂಚಿಸಿದರು.

ಇದಕ್ಕೂ ಮೊದಲು ನಡೆದ ಕಲಾಪದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್, ಬೆಹೂರಾ ಹೊರತು ಪಡಿಸಿ ಐವರು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಿಬಿಐನಿಂದ ಯಾವುದೇ ವಿರೋಧವಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದರು.

ಬೆಹೂರಾ ಸರ್ಕಾರಿ ಸೇವೆಯಲ್ಲಿದ್ದವರು. ಅವರಿಗೆ ಜಾಮೀನು ನೀಡುವಾಗ ಕೂಲಂಕಷ ಪರಿಶೀಲನೆ ಅಗತ್ಯ. ಏಕೆಂದರೆ ಸರ್ಕಾರಿ ನೌಕರರು ಸಾರ್ವಜನಿಕ ಆಸ್ತಿಪಾಸ್ತಿಯ ಸಂರಕ್ಷರು ಎಂದು ಪರಾಶರನ್ ತಿಳಿಸಿದರು.

ಇದೇ ಪ್ರಕರಣದ ಇತರ ಐವರು ಆರೋಪಿಗಳಾದ ಕಾರ್ಪೊರೇಟ್ ಉದ್ದಿಮೆಗಳ ಹಿರಿಯ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಕನಿಮೊಳಿ ಮತ್ತು ಐವರು ಆರೋಪಿಗಳು ತಮ್ಮ ಜಾಮೀನು ಅರ್ಜಿ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ಅನ್ನು ನವೆಂಬರ್ 23ರಂದು ಕೋರಿದ್ದರು.  ಹೈಕೋರ್ಟ್ ಈ ಅರ್ಜಿ ವಿಚಾರಣೆಯನ್ನು ಈ ಮೊದಲು ಡಿಸೆಂಬರ್ 1ಕ್ಕೆ ನಿಗದಿ ಪಡಿಸಿತ್ತು.

ಅಧೀನ ನ್ಯಾಯಾಲಯವು ಕನಿಮೊಳಿ ಮತ್ತು ಇತರ ಐವರ ಜಾಮೀನು ಅರ್ಜಿಯನ್ನು ನವೆಂಬರ್ 3ರಂದು ತಳ್ಳಿಹಾಕಿದ ನಂತರ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಯೂನಿಟೆಕ್ ಕಂಪೆನಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯೆಂಕಾ ಮತ್ತು ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ಹಿರಿಯ ಅಧಿಕಾರಿಗಳಾದ ಗೌತಮ್ ದೋಶಿ, ಹರಿ ನಾಯರ್ ಮತ್ತು ಸುರೇಂದ್ರ ಪಿಪರಾ ಅವರಿಗೆ ಸುಪ್ರೀಂಕೋರ್ಟ್ ಕಳೆದ ವಾರ ಷರತ್ತು ಬದ್ಧ ಜಾಮೀನು ನೀಡಿತ್ತು.

ಷರತ್ತುಗಳು: ನ್ಯಾಯಾಲಯದ ವಶಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು, ಪ್ರಕರಣದ ಪ್ರತಿಯೊಂದು ವಿಚಾರಣೆಗೂ ತಪ್ಪದೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕು, ಒಂದು ವೇಳೆ ಹಾಜರಾಗಲು ಆಗದಿದ್ದರೆ ಪೂರ್ವಾನುಮತಿ ಪಡೆಯಬೇಕು ಎಂಬ ಷರತ್ತುಗಳನ್ನು ಸುಪ್ರೀಂಕೋರ್ಟ್ ವಿಧಿಸಿದೆ.

ಪ್ರಕರಣದ ಪ್ರಮುಖ ಆರೋಪಿಯಾದ ಎ.ರಾಜಾ ಸೇರಿದಂತೆ 14 ಮಂದಿಯನ್ನು ಸಿಬಿಐ ಬಂಧಿಸಿತ್ತು. ಕನಿಮೊಳಿ ಮತ್ತು ಶರತ್ ಕುಮಾರ್ ಮೇ 20ರಂದು ಬಂಧಿತರಾಗಿದ್ದರು. ಸದ್ಯ ಇವರಲ್ಲಿ 10 ಮಂದಿಗೆ ಜಾಮೀನು ದೊರಕಿದ್ದು, ನಾಲ್ವರು ಇನ್ನೂ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಇದ್ದಾರೆ.

ಫೆಬ್ರುವರಿ 2ರಂದು ಬಂಧಿತರಾದ ಎ.ರಾಜಾ ಇದುವರೆಗೂ ಜಾಮೀನು ಕೋರಿಲ್ಲ. ಸಿದ್ಧಾರ್ಥ ಬೆಹೂರಾ ಅವರ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಲಾಗಿದೆ. ಎ.ರಾಜಾ ಅವರ ಖಾಸಗಿ ಕಾರ್ಯದರ್ಶಿ ಚಂದೋಲಿಯಾ, ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ ಅವರ ಜಾಮೀನು ಅರ್ಜಿ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಬುಧವಾರ ಬರಲಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಟೆಲಿಕಾಂ ಕಂಪೆನಿಗಳಾದ ರಿಲಯನ್ಸ್, ಸ್ವಾನ್ ಮತ್ತು ಯೂನಿಟೆಕ್ (ತಮಿಳುನಾಡು) ವೈರ್‌ಲೆಸ್ ಲಿಮಿಟೆಡ್ ವಿರುದ್ಧವೂ ಸಿಬಿಐ ಆರೋಪಪಟ್ಟಿ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.