ADVERTISEMENT

ಕೋಯಿಕ್ಕೋಡ್‌ನಲ್ಲಿ ರಸ್ತೆ ಅಪಘಾತ: ಹಾಸ್ಯ ನಟ ಜಗತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಕೋಯಿಕ್ಕೋಡ್ (ಐಎಎನ್‌ಎಸ್): ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಜಗತಿ ಶ್ರೀಕುಮಾರ್ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

`ಜಗತಿ ಅವರ ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿವೆ. ಅಗತ್ಯ ಎನಿಸಿದ್ದಲ್ಲಿ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು. ಸದ್ಯ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ~ ಎಂದು ಹತ್ತು ವೈದ್ಯರನ್ನೊಳಗೊಂಡ ತಂಡದ ಮುಖ್ಯಸ್ಥ ವೇಣುಗೋಪಾಲ ಅವರು ತಿಳಿಸಿದ್ದಾರೆ.

62 ವರ್ಷದ ಜಗತಿ ಒಂದು ಸಾವಿರಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಲೆನಿನ್ ರಾಜೇಂದ್ರನ್ ಅವರ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವರು ತ್ರಿಶೂರ್‌ನಿಂದ ಕೊಡಗಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಕೋಯಿಕ್ಕೋಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಬೆಳಿಗ್ಗೆ 4.30ಕ್ಕೆ ಅಪಘಾತ ಸಂಭವಿಸಿದೆ.

ಇವರಿದ್ದ ಇನ್ನೋವಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.