ADVERTISEMENT

ಗಡಿಯಲ್ಲಿ ಪಾಕ್ ಉದ್ಧಟ ದಾಳಿ: ಐವರು ಭಾರತೀಯ ಯೋಧರ ಹತ್ಯೆ

ಸಂಸತ್ತಿನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 10:21 IST
Last Updated 6 ಆಗಸ್ಟ್ 2013, 10:21 IST
ಕಾವಲು ನಿರತ ಯೋಧ (ಕಡತ ಚಿತ್ರ).
ಕಾವಲು ನಿರತ ಯೋಧ (ಕಡತ ಚಿತ್ರ).   

ಜಮ್ಮು (ಪಿಟಿಐ): ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಿಭಾಗದ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ನೆಲದೊಳಕ್ಕೆ ನುಗ್ಗಿ ಉದ್ಧಟತನ ಹಾಗೂ ಪ್ರಚೋದನಾತ್ಮಕ ದಾಳಿ ನಡೆಸಿ ಭಾರತದ ಐವರು ಕಾವಲು ನಿರತ ಯೋಧರನ್ನು ಕೊಂದು ಹಾಕಿದ ಘಟನೆ ಮಂಗಳವಾರ ನಸುಕಿನಲ್ಲಿ ಘಟಿಸಿದೆ.

ಈ ವಿಚಾರವು ಈದಿನ ಸಂಸತ್ತಿನಲ್ಲಿ ಪ್ರತಿಧ್ವನಿಸಿ ಕಲಾಪ ಅಸ್ತವ್ಯಸ್ತಗೊಂಡಿತು. ಉಭಯ ಸದನಗಳಲ್ಲೂ ಸದಸ್ಯರು ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಕಟು ಪ್ರತಿಕ್ರಿಯೆ ನೀಡಬೇಕು ಎಂದು ಬಲವಾಗಿ ಆಗ್ರಹಿಸಿದರು. ಕೋಲಾಹಲದ ಮಧ್ಯೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ಸುಮಾರು 20ರಷ್ಟು ಸಂಖ್ಯೆಯಲ್ಲಿದ್ದ ಪಾಕಿಸ್ತಾನಿ ಸೈನಿಕರು ಮಧ್ಯರಾತ್ರಿಯ ಬಳಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲದೊಳಕ್ಕೆ ನುಗ್ಗಿ ಬಂದು ಸರ್ಲಾ ಪೋಸ್ಟ್ ನಲ್ಲಿ ಕಾವಲು ನಿರತರಾಗಿದ್ದ ಭಾರತೀಯ ಯೋಧರ ತಂಡದ ಮೇಲೆ ದಾಳಿ ನಡೆಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ನಸುಕಿನ 2 ಗಂಟೆ ಸುಮಾರಿಗೆ ನಡೆದ ಈ ದಾಳಿಯಲ್ಲಿ 21 ಬಿಹಾರ ಘಟಕದ ಒಬ್ಬ ಸುಭೇದಾರ್ ಮತ್ತು ನಾಲ್ವರು ಯೋಧರು ಹತರಾದರು ಎಂದು ಮೂಲಗಳು ತಿಳಿಸಿದವು.

ಗಡಿ ನಿಯಂತ್ರಣ ರೇಖೆಯಿಂದ ಸುಮಾರು 450 ಮೀಟರ್ ನಷ್ಟು ದೂರದಲ್ಲಿ ಭಾರತೀಯ ನೆಲದಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಹೇಳಿದವು.

'ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಐವರು ಯೋಧರನ್ನು ಹತ್ಯೆಗೈದ ವಿಚಾರವನ್ನು ಈ ದಿನ ನಸುಕಿನಲ್ಲಿ ನನಗೆ ತಿಳಿಸಲಾಗಿದೆ. ಅವರ ಕುಟುಂಬ ಸದಸ್ಯರಿಗೆ ನಾನು ನನ್ನ ದುಃಖಭರಿತ ಸಂತಾಪ ವ್ಯಕ್ತ ಪಡಿಸುತ್ತಿದ್ದೇನೆ' ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಘಟನೆ ಬಗ್ಗೆ ಟ್ವಿಟ್ಟರ್ ಸಂದೇಶ ನೀಡಿದ್ದಾರೆ.

'ಈ ಘಟನೆಗಳು ಪಾಕ್ ಜೊತೆಗಿನ ಬಾಂಧವ್ಯ ವೃದ್ಧಿ ಬಿಡಿ ಬಾಂಧವ್ಯ ಮಾಮೂಲುಗೊಳಿಸುವ ಯತ್ನಕ್ಕೂ ಧಕ್ಕೆ ಉಂಟು ಮಾಡುತ್ತವೆ' ಎಂದು ಅವರು ಹೇಳಿದ್ದಾರೆ.

ಸೇನಾ ದಂಡನಾಯಕ ಜನರಲ್ ಬಿಕ್ರಮ್ ಸಿಂಗ್ ಅವರು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ ಎಂದು ದೆಹಲಿಯಲ್ಲಿ ಸೇನಾ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.