ADVERTISEMENT

ಗಣಿ ಮಾಲೀಕತ್ವ ಬಹಿರಂಗಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ನವದೆಹಲಿ: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ `ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ~ ಹಾಗೂ `ಡೆಕ್ಕನ್ ಮೈನಿಂಗ್ ಸಿಂಡಿಕೇಟ್~ನ ಮಾಲೀಕರು ಯಾರು ಎಂದು ಬಹಿರಂಗಪಡಿಸುವಂತೆ ಕೇಂದ್ರ ತನಿಖಾ ದಳ (ಸಿಬಿಐ) ಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಕರ್ನಾಟಕ ಮತ್ತು ಆಂಧ್ರದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆಗೆ ಸಂಬಂಧಿಸಿದ ಸೆಪ್ಟೆಂಬರ್ 30ರವರೆಗಿನ  ಪ್ರಗತಿಯ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್. ಎಚ್ ಕಪಾಡಿಯಾ ನೇತೃತ್ವದ ಅರಣ್ಯ ಪೀಠಕ್ಕೆ ಸಲ್ಲಿಸಿದ ಸಂದರ್ಭದಲ್ಲಿ  ನ್ಯಾಯಾಲಯ ಈ ನಿರ್ದೇಶನ ನೀಡಿತು.

ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಸಿಬಿಐ ತನಿಖೆಯ ಪ್ರಗತಿ ವರದಿಯನ್ನು ಸೀಲು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಅಕ್ರಮ ಗಣಿಗಾರಿಕೆ ಕುರಿತಂತೆ ಕರ್ನಾಟಕದಲ್ಲೂ ಸಿಬಿಐ ತನಿಖೆ ಆರಂಭಿಸಿದೆ. ಅಲ್ಲಿ ಏನಾಗಿದೆ ಎಂಬ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಹೇಳಿತು. ಈ ವರದಿ ಸಲ್ಲಿಸಲು ಮೂರು ವಾರ ಕಾಲಾವಕಾಶ ನೀಡಿತು.

~ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಣ್ಣಪುಟ್ಟವರನ್ನು ಹಿಡಿಯಬೇಡಿ. ದೊಡ್ಡವರನ್ನು ಬಿಡಬೇಡಿ~ ಎಂದು ಮುಖ್ಯ ನ್ಯಾಯಮೂರ್ತಿ ತನಿಖಾ ದಳಕ್ಕೆ ಸೂಚಿಸಿದರು. ಸುಪ್ರೀಂ ಕೋರ್ಟ್ ಹಿಂದಿನ ವಿಚಾರಣೆ ವೇಳೆ ಕರ್ನಾಟಕದ ಅಕ್ರಮ ಗಣಿಗಾರಿಕೆ   ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.